ADVERTISEMENT

Video-ಸಂತ ರವಿದಾಸ ಜಯಂತಿ: ವಾರಾಣಸಿಯಲ್ಲಿ ರಾಹುಲ್, ಪ್ರಿಯಾಂಕಾ ಲಂಗರ್ ಸೇವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2022, 10:58 IST
Last Updated 16 ಫೆಬ್ರುವರಿ 2022, 10:58 IST
ವಾರಾಣಸಿಯ ಸಮೀಪ ಗುರುದಾಸರ ಮಂದಿರದಲ್ಲಿ ಭಕ್ತಾದಿಗಳಿಗೆ ಊಟ ಬಡಿಸಿದ ರಾಹುಲ್‌ ಗಾಂಧಿ
ವಾರಾಣಸಿಯ ಸಮೀಪ ಗುರುದಾಸರ ಮಂದಿರದಲ್ಲಿ ಭಕ್ತಾದಿಗಳಿಗೆ ಊಟ ಬಡಿಸಿದ ರಾಹುಲ್‌ ಗಾಂಧಿ   

ನವದೆಹಲಿ: ಕವಿ ಮತ್ತು ಸಂತ ರವಿದಾಸ ಜಯಂತಿ ಪ್ರಯುಕ್ತ ಉತ್ತರ ಪ್ರದೇಶದ ವಾರಾಣಸಿಯ ದೇವಾಲಯದಲ್ಲಿ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಕ್ತಾದಿಗಳಿಗೆ ಭೋಜನ (ಲಂಗರ್‌) ಬಡಿಸಿದರು.

15–16ನೇ ಶತಮಾನದ ಸಮಾಜ ಸುಧಾರಕ, ಕವಿ, ದಲಿತರ ಆರಾಧಕ ರವಿದಾಸರ ಹುಟ್ಟಿದ ದಿನದ ಪ್ರಯುಕ್ತ ಅವರ ಜನ್ಮ ಸ್ಥಳಕ್ಕೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಇಂದು ಭೇಟಿ ನೀಡಿದರು. ವಾರಾಣಸಿಯ ಬಾಬತಪುರದಲ್ಲಿರುವ (ಸೀರ್‌ ಗೋವರ್ಧನ್‌) ಗುರು ರವಿದಾಸರ ದೇವಾಲಯದಲ್ಲಿ ಅವರು 'ಲಂಗರ್‌ ಸೇವೆ' ಸಲ್ಲಿಸಿದರು.

ಉತ್ತರ ಪ್ರದೇಶ ಚುನಾವಣೆಯ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿಯು ಗುರು ರವಿದಾಸ ಅವರ ಚಿತ್ರವನ್ನು ನೀಡಿತು.

ADVERTISEMENT

ಜಾತಿ ಮತ್ತು ಲಿಂಗದ ಆಧಾರದ ಮೇಲೆ ಸಮಾಜದಲ್ಲಿ ವರ್ಗೀಕರಣ ಮಾಡುವುದು, ಅಸಮಾನತೆ ತರುವುದನ್ನು ಸಂತ ರವಿದಾಸ ವಿರೋಧಿಸಿದ್ದರು. ಎಲ್ಲರಿಗೂ ಸಮಾನತೆ ಮತ್ತು ಗೌರವ ಸಿಗಬೇಕೆಂದು ಆಶಿಸಿದ್ದರು.

ಇವತ್ತು ಬೆಳಿಗ್ಗೆ ದೆಹಲಿಯ ಕರೋಲ್‌ ಬಾಗ್‌ನ ಗುರು ರವಿದಾಸ ವಿಶ್ರಮ ಧಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದ್ದರು. ಭಕ್ತರೊಂದಿಗೆ ಮಾತುಕತೆ ನಡೆಸಿದ್ದ ಅವರು ಕೀರ್ತನೆ ಗಾಯನದಲ್ಲಿ ಭಾಗಿಯಾಗಿದ್ದರು. ನಮ್ಮ ಸರ್ಕಾರವು ಪ್ರತಿಯೊಂದು ಹಂತದಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಗುರು ರವಿದಾಸರ ದೃಷ್ಟಿಯು ಅಡಕವಾಗಿದೆ ಎಂದು ಪ್ರಧಾನಿ ಹೇಳಿದರು.

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಚುನಾವಣಾ ಪ್ರಚಾರ ಕಾರ್ಯಗಳ ನಡುವೆಯೇ ಉತ್ತರ ಪ್ರದೇಶದ ಸೀರ್‌ ಗೋವರ್ಧನಪುರದ ಮಂದಿರಕ್ಕೆ ಬೆಳಗ್ಗಿನ ಜಾವ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

ಗುರು ರವಿದಾಸ ಜಯಂತಿಯ ಕಾರಣದಿಂದಾಗಿಯೇ ಚುನಾವಣಾ ಆಯೋಗವು ಪಂಜಾಬ್‌ ವಿಧಾನಸಭಾ ಚುನಾವಣೆಯನ್ನು ಮುಂದೂಡಿತ್ತು. ಮೊದಲು ಫೆಬ್ರುವರಿ 14ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಫೆಬ್ರುವರಿ 20ಕ್ಕೆ ನಿಗದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.