ಉಗ್ರರ ದಾಳಿಯಲ್ಲಿ ಹತ್ಯೆಯಾದ ಕಾನ್ಪುರದ ಶುಭಂ ಅವರ ಪತ್ನಿ ಇಶಾನ್ಯ ಅವರನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಭೇಟಿ ಮಾಡಿದರು
–ಪಿಟಿಐ ಚಿತ್ರ
ಲಖನೌ/ಅಮೇಠಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಯಾದ ಕಾನ್ಪುರದ ಶುಭಂ ದ್ವಿವೇದಿ ಅವರ ಕುಟುಂಬವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಭೇಟಿ ಮಾಡಿದರು.
ಕಾನ್ಪುರ ಜಿಲ್ಲೆಯ ಹಾಥಿಪುರ ಗ್ರಾಮದಲ್ಲಿರುವ ಶುಭಂ ಅವರ ಮನೆಯಲ್ಲಿ ಸುಮಾರು 20 ನಿಮಿಷಗಳವರೆಗೆ ರಾಹುಲ್ ಇದ್ದರು. ‘ನಾನು ನನ್ನ ಅಜ್ಜಿ ಮತ್ತು ಅಪ್ಪನನ್ನು ಭಯೋತ್ಪಾದನೆಯ ಕಾರಣದಿಂದಲೇ ಕಳೆದುಕೊಂಡಿದ್ದೇನೆ’ ಎಂದು ಹೇಳಿ ರಾಹುಲ್ ಅವರು ಶುಭಂ ಅವರ ಪತ್ನಿ ಇಶಾನ್ಯ ಅವರಿಗೆ ಸಮಾಧಾನ ಮಾಡಿದರು.
‘ಶುಭಂ ಅವರಿಗೆ ಹುತಾತ್ಮ ಸ್ಥಾನಮಾನ ನೀಡಬೇಕು’ ಎಂದು ಪತ್ನಿ ಇಶಾನ್ಯ ಆಗ್ರಹಿಸಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ರಾಹುಲ್ ಅವರು ಭರವಸೆ ನೀಡಿದರು.
ದಾಳಿಯ ವೇಳೆ ನಡೆದ ಘಟನಾವಳಿಗಳ ಬಗ್ಗೆ ಇಶಾನ್ಯ ಅವರು ರಾಹುಲ್ ಅವರಿಗೆ ವಿವರಿಸಿದರು. ‘ಪಹಲ್ಗಾಮ್‌ನಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇರಲಿಲ್ಲ’ ಎಂದು ಇಶಾನ್ಯ ಹೇಳಿದರು. ಇಶಾನ್ಯ ಅವರ ಸಹೋದರಿ ಮಾತನಾಡಿ, ‘ಸಹಾಯಕ್ಕಾಗಿ ನಾವು ಸ್ಥಳೀಯರಲ್ಲಿ ಮನವಿ ಮಾಡಿದೆವು. ಆದರೆ, ಯಾರೂ ಮುಂದೆ ಬರಲಿಲ್ಲ’ ಎಂದರು.
ಶುಭಂ ಮತ್ತು ಇಶಾನ್ಯ ಅವರು ಇದೇ ಫೆ.12ರಂದು ವಿವಾಹವಾಗಿದ್ದರು. ಕುಟುಂಬ ಸಮೇತ ಪಹಲ್ಗಾಮ್‌ಗೆ ಪ್ರವಾಸ ಹೋಗಿದ್ದರು.
ರಾಹುಲ್ ವಿರುದ್ಧ ಅವಹೇಳನಾಕಾರಿ ಪೋಸ್ಟರ್
ರಾಹುಲ್ ಗಾಂಧಿ ಅವರು ಬುಧವಾರ ಅಮೇಠಿಗೆ ಭೇಟಿ ನೀಡುವ ಕೆಲವು ಗಂಟೆಗಳ ಮೊದಲು ಇಲ್ಲಿನ ಕಾಂಗ್ರೆಸ್ ಕಚೇರಿ ಬಳಿಯೂ ಸೇರಿದಂತೆ ನಗರಾದ್ಯಂತ ‘ರಾಹುಲ್ ಗಾಂಧಿ ಭಯೋತ್ಪಾದಕರ ಬೆಂಬಲಿಗ’ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಭದ್ರತೆ ಒದಗಿಸಲಾಗಿತ್ತಾದರೂ ಸಂಘರ್ಷ ಏರ್ಪಡುವ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಪೋಸ್ಟರ್‌ಗಳನ್ನು ತೆರವು ಮಾಡಿದರು. ಪೋಸ್ಟರ್ ಅಂಟಿಸಿರುವುದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ತಿಳಿದುಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.