ADVERTISEMENT

50 ಸುಸ್ತಿದಾರರ ಮಾಹಿತಿ ನೀಡುವಂತೆ ಸರ್ಕಾರಕ್ಕೆ ರಾಹುಲ್ ಗಾಂಧಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 10:36 IST
Last Updated 16 ಮಾರ್ಚ್ 2020, 10:36 IST
   

ನವದೆಹಲಿ: ಅತಿ ಹೆಚ್ಚು ಸಾಲಪಡೆದು ಉದ್ದೇಶ ಪೂರ್ವಕವಾಗಿ ಸಾಲ ಮರು ಪಾವತಿ ಮಾಡದ ಟಾಪ್‌ 50 ಸುಸ್ತಿದಾರರ ಮಾಹಿತಿ ನೀಡುವಂತೆಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಸೋಮವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ರಾಹುಲ್‌ ಗಾಂಧಿ50 ಸುಸ್ತಿದಾರರ ಮಾಹಿತಿ ನೀಡುವಂತೆ ಸರ್ಕಾರವನ್ನು ಕೋರಿದರು. ರಾಹುಲ್‌ ಪ್ರಶ್ನೆಗೆಹಣಕಾಸು ಖಾತೆಯ ರಾಜ್ಯಸಚಿವ ಅನುರಾಗ್‌ ಠಾಕೂರ್‌ ಉತ್ತರಿಸಿದರು. ಇದೇ ವೇಳೆ ಸಚಿವರು ಯುಪಿಎ ಸರ್ಕಾರದ ಅವಧಿಯಲ್ಲಿ ಅವ್ಯವಹಾರಗಳು ನಡೆದಿವೆ ಎಂದರು. ಪ್ರಿಯಾಂಕ ಗಾಂಧಿ ವಾದ್ರಾ ಅವರ ಹೆಸರನ್ನು ಉಲ್ಲೇಖಿಸದೇಕೆಲವರ ವರ್ಣಚಿತ್ರಗಳ ಖರೀದಿ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದಾಗ ರಾಹುಲ್‌ ಗಾಂಧಿ ಎರಡನೇ ಪ್ರಶ್ನೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಆದರೆ ಸ್ಪೀಕರ್‌ ಅವರು ಪ್ರಶ್ನೋತ್ತರ ಕಲಾಪ ಮುಗಿಯಿತು ಎಂದು ಹೇಳಿದಾಗಕಾಂಗ್ರೆಸ್‌ ಸದಸ್ಯರು ಗದ್ದಲ ಮಾಡಿ ಸದನದಿಂದ ಹೊರ ನಡೆದರು.

ಉದ್ದೇಶ ಪೂರ್ವಕವಾಗಿ ಸಾಲ ಮರುಪಾವತಿ ಮಾಡದ ಸುಸ್ತಿದಾರರ ವಿವರ ಮತ್ತು ಅವರು ಬ್ಯಾಂಕುಗಳಿಗೆ ಕಟ್ಟಿಬೇಕಿರುವ ಹಣದ ಮೊತ್ತವನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಸರ್ಕಾರವನ್ನು ಕೋರಿದ್ದೆ. ಆದರೆ ಸರ್ಕಾರದಿಂದ ಸಮರ್ಪಕ ಉತ್ತರ ದೊರೆತಿಲ್ಲ ಎಂದು ರಾಹುಲ್‌ ಹೇಳಿದರು.

ADVERTISEMENT

ದೇಶದ ಆರ್ಥಿಕ ವ್ಯವಸ್ಥೆ ಕಠಿಣ ಪರಿಸ್ಥಿಯನ್ನು ಎದುರಿಸುತ್ತಿದೆ. ಬ್ಯಾಂಕಿಂಗ್‌ ವ್ಯವಸ್ಥೆ ಹದಗೆಟ್ಟಿದೆ. ಇನ್ನು ಕೆಲವು ಬ್ಯಾಂಕುಗಳು ಮುಚ್ಚಿಹೋಗುವ ಹಂತದಲ್ಲಿವೆ. ಇದಕ್ಕೆಲ್ಲಾ ಕಾರಣ, ಕೆಲವರು ಬ್ಯಾಂಕಿನ ಹಣವನ್ನು ದರೋಡೆ ಮಾಡುತ್ತಿದ್ದಾರೆ ಎಂದು ರಾಹುಲ್‌ ಸದನದ ಗಮನ ಸೆಳೆದರು.

ಮಸೂಲಾಗದ ಸಾಲವನ್ನು ಮಸೂಲಿ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದುಪ್ರಧಾನಮಂತ್ರಿಗಳು ಹೇಳಿದ್ದಾರೆ. ಆದರೆ ನನ್ನದೊಂದು ಸಣ್ಣ ಪ್ರಶ್ನೆಗೆ ಅವರಿಂದ ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ಹಣಕಾಸು ಖಾತೆಯ ರಾಜ್ಯಸಚಿವ ಅನುರಾಗ್‌ ಠಾಕೂರ್‌ ಉತ್ತರಿಸಲು ಮುಂದಾದರು. ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಸದಸ್ಯರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಉತ್ತರಿಸಬೇಕು ಎಂದು ಪಟ್ಟು ಹಿಡಿದರು. ಮಧ್ಯಪ್ರವೇಶಿಸಿದ ಸ್ಫೀಕರ್ ಓಂ ಬಿರ್ಲಾ, ಸಾಮಾನ್ಯವಾಗಿ ಪ್ರಶ್ನೋತ್ತರ ಕಲಾಪದಲ್ಲಿ ಕಿರಿಯ ಸಚಿವರೇ ಉತ್ತರಿಸುತ್ತಾರೆ ಎಂದು ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲಾದ ಹಣಕಾಸು ಅವ್ಯವಹಾರಗಳಿಗೆ ಎನ್‌ಡಿಎ ಸರ್ಕಾರವನ್ನು ಹೊಣೆ ಮಾಡಲಾಗುತ್ತಿದೆ. ಬ್ಯಾಂಕಿನ ಹಣಕಾಸು ಅವ್ಯವಹಾರಗಳನ್ನು ತಡೆಯಲು ಮೋದಿ ಸರ್ಕಾರ ಅಗತ್ಯಕ್ರಮಗಳನ್ನು ಕೈಗೊಂಡಿದೆ ಎಂದರು.₹ 25 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡದವರ ಹೆಸರನ್ನು ಕೇಂದ್ರದ ಮಾಹಿತಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸ್ಪೀಕರ್‌ ಅವರು ಅನುಮತಿ ಕೊಟ್ಟರೆ ಸುಸ್ತಿದಾರರ ಮಾಹಿತಿ ನೀಡುತ್ತೆನೆ ಎಂದು ಸದನಕ್ಕೆ ತಿಳಿಸಿದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ₹ 4.8 ಲಕ್ಷ ಕೋಟಿಯಷ್ಟು ವಸೂಲಾಗದ ಸಾಲವನ್ನು ಮಸೂಲು ಮಾಡಲಾಗಿದೆ. ಆರ್ಥಿಕ ಅಪರಾಧಗಳ ಕಾಯ್ದೆ ಅನ್ವಯ ಕೆಲವರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಠಾಕೂರ್‌ ಮಾಹಿತಿ ನೀಡಿದರು.

ಇತ್ತೀಚಿನ ಯೆಸ್ ಬ್ಯಾಂಕ್ ಬಿಕ್ಕಟ್ಟನ್ನು ಉಲ್ಲೇಖಿಸಿದ ಠಾಕೂರ್,ಬ್ಯಾಂಕಿನಲ್ಲಿ ಠೇವಣಿ ಇರಿಸಿದವರ ಹಣ ಸುರಕ್ಷಿತವಾಗಿದ್ದುಬ್ಯಾಂಕಿನ ಎಲ್ಲ ಸೇವೆಗಳು ಮಾರ್ಚ್‌ 18ರಂದು ಆರಂಭವಾಗಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈಗಾಗಲೇ ಸದನಕ್ಕೆ ಮಾಹಿತಿ ನೀಡಿದ್ದಾರೆ ಎಂದು ಠಾಕೂರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.