ADVERTISEMENT

ರಾಹುಲ್‌ ಹೇಳಿಕೆ ಬಳಸಿಕೊಂಡ ಪಾಕ್‌ ಕಾಂಗ್ರೆಸ್‌ ಕ್ಷಮೆಗೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:50 IST
Last Updated 28 ಆಗಸ್ಟ್ 2019, 19:50 IST
   

ನವದೆಹಲಿ: ‘ಜಮ್ಮು–ಕಾಶ್ಮೀರದಲ್ಲಿ ಹಿಂಸಾಚಾರವಿದ್ದು, ಜನರು ಸಾಯುತ್ತಿದ್ದಾರೆ ಎಂಬ ವರದಿಗಳಿವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇದೇ 10ರಂದು ನೀಡಿದ್ದ ಹೇಳಿಕೆ ಮತ್ತು ವಿಶ್ವಸಂಸ್ಥೆಗೆ ದೂರು ನೀಡಲು ಪಾಕಿಸ್ತಾನವು ಅದನ್ನು ಬಳಸಿಕೊಂಡಿರುವುದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿಯ ತೀಕ್ಷ್ಣ ಟೀಕೆಯ ನಡುವೆಯೇ ರಾಹುಲ್‌ ಮತ್ತು ಕಾಂಗ್ರೆಸ್‌ ಪಕ್ಷ ಸ್ಪಷ್ಟನೆ ನೀಡಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು–ಕಾಶ್ಮೀರ ವಿಚಾರವನ್ನು ನಿರ್ವಹಿಸಿದ ಬಗ್ಗೆ ಭಿನ್ನಮತ ಇರಬಹುದು. ಆದರೆ, ಜಮ್ಮು–ಕಾಶ್ಮೀರವು ಭಾರತದ ಆಂತರಿಕ ವಿಚಾರ. ಇದರಲ್ಲಿ ಪಾಕಿಸ್ತಾನದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶ ಇಲ್ಲ ಎಂದು ಕಾಂಗ್ರೆಸ್‌ ಪಕ್ಷವು ಬುಧವಾರ ಹೇಳಿದೆ. ಈ ಮೂಲಕ ಈ ವಿಚಾರದಲ್ಲಿ ಪಕ್ಷದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದೆ.

ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಪಕ್ಷವು ಸ್ಪಷ್ಟೀಕರಣ ನೀಡಿದೆ. ಶ್ರೀನಗರಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದ ವಿಪಕ್ಷ ನಿಯೋಗವನ್ನು ವಿಮಾನ ನಿಲ್ದಾಣದಲ್ಲಿಯೇ ತಡೆದು ವಾಪಸ್‌ ಕಳುಹಿಸಲಾಗಿತ್ತು. ಬಳಿಕ ರಾಹುಲ್‌ ಹೇಳಿಕೆ ನೀಡಿದ್ದರು.

ADVERTISEMENT

‘ಹಲವು ವಿಚಾರಗಳಲ್ಲಿ ಈ ಸರ್ಕಾರದ ವಿರುದ್ಧ ನನಗೆ ಭಿನ್ನಾಭಿಪ್ರಾಯ ಇದೆ. ಆದರೆ, ಒಂದು ವಿಚಾರವನ್ನು ಅತ್ಯಂತ ಸ್ಪಷ್ಟಪಡಿಸಲು ಬಯಸುತ್ತೇನೆ: ಕಾಶ್ಮೀರವು ಭಾರತದ ಆಂತರಿಕ ವಿಚಾರ. ಪಾಕಿಸ್ತಾನ ಅಥವಾ ಬೇರೆ ಯಾವುದೇ ದೇಶಕ್ಕೆ ಈ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ’ ಎಂದು ರಾಹುಲ್‌ ಬುಧವಾರ ಟ್ವೀಟ್‌ ಮಾಡಿದ್ದಾರೆ.

ರಾಹುಲ್ ಅವರು ಭಾರತವನ್ನು ಅಪಮಾನಿಸಿದ್ದಾರೆ. ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಆರೋಪ ಮಾಡಲು ಪಾಕಿಸ್ತಾನಕ್ಕೆ ಅವರು ‘ಅಸ್ತ್ರ’ವೊಂದನ್ನು ಕೊಟ್ಟಿದ್ದಾರೆ. ಅದಕ್ಕಾಗಿ ಅವರು ಮತ್ತು ಕಾಂಗ್ರೆಸ್‌ ಪಕ್ಷವು ದೇಶದ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಆಗ್ರಹಿಸಿದ್ದಾರೆ.

ಇದು ಈ ದೇಶ ಕಂಡ ಅತ್ಯಂತ ಬೇಜವಾಬ್ದಾರಿ ರಾಜಕಾರಣ. ಪಾಕಿಸ್ತಾನವು ರಾಹುಲ್‌ ಅವರ ಹೇಳಿಕೆಯನ್ನು ‘ಪುರಾವೆ’ಯಾಗಿ ಬಳಸಿಕೊಳ್ಳುತ್ತಿದೆ. ಈ ಭಾಷೆಯಲ್ಲಿ ಭಾರತದಲ್ಲಿ ಇದುವರೆಗೆ ಯಾರೂ ಮಾತನಾಡಿಲ್ಲ. ಭಾರತವನ್ನು ಕಾಂಗ್ರೆಸ್‌ ಪಕ್ಷವು ಕೆಟ್ಟದಾಗಿ ಬಿಂಬಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಪಾಕಿಸ್ತಾನವು ವಿಶ್ವಸಂಸ್ಥೆಗೆ ದೂರೊಂದನ್ನು ನೀಡಿದೆ. ಅದರಲ್ಲಿ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಎಳೆದು ತಂದು ಕುಚೋದ್ಯ ಮಾಡಲಾಗಿದೆ. ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಹರಡುತ್ತಿರುವ ಸುಳ್ಳುಗಳಿಗೆ ಇದನ್ನು ಸಮರ್ಥನೆಯಾಗಿ ಬಳಸಿಕೊಳ್ಳಲಾಗಿದೆ ಎಂಬುದು ಪಕ್ಷಕ್ಕೆ ಗಮನಕ್ಕೆ ಬಂದಿದೆ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

***

ಜಮ್ಮು–ಕಾಶ್ಮೀರದಲ್ಲಿ ಹಿಂಸಾಚಾರ ಇದೆ. ಇದಕ್ಕೆ ಕಾರಣ ಪಾಕಿಸ್ತಾನದ ಕುಮ್ಮಕ್ಕು ಮತ್ತು ಬೆಂಬಲ. ಆ ದೇಶವು ಭಯೋತ್ಪಾದನೆಯ ಬೆಂಬಲಿಗ ಎಂಬುದು ಜಗತ್ತಿಗೇ ಗೊತ್ತಿದೆ

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಭಾರತದ ನಾಯಕರೊಬ್ಬರು ತ್ರಿವರ್ಣಧ್ವಜದ ಬಗ್ಗೆ, ಅದರ ಮೌಲ್ಯದ ಬಗ್ಗೆ ಕಡಿಮೆ ಯೋಚಿಸುತ್ತಾರೆ. ಆದರೆ, ಶತ್ರು ದೇಶದವರು ಅವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದು ದುರದೃಷ್ಟಕರ

–ಸ್ಮೃತಿ ಇರಾನಿ, ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.