ಪ್ರಾತಿನಿಧಿಕ ಚಿತ್ರ
ಠಾಣೆ: ಕಾಣೆಯಾಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಸಂಬಂಧಿಗಳೇ ಕೊಲೆ ಮಾಡಿ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದ ಪ್ರಕರಣವನ್ನು ಮಹಾರಾಷ್ಟ್ರದ ರಾಯಗಢ ಪೊಲೀಸರು ಒಂದು ವರ್ಷಗಳ ಬಳಿಕ ಭೇದಿಸಿದ್ದಾರೆ.
ಸದ್ಯ ಮೃತ ಬಾಲಕಿಯ ತಲೆಬುರುಡೆಯನ್ನು ಪತ್ತೆ ಮಾಡಿರುವ ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ವರ್ಷ ಮೃತ ಬಾಲಕಿಯ ತಂದೆ ರಾಹುಲ್ ಘಡ್ಜೆ ಜೈಲು ಸೇರಿದ್ದರು. ಆ ಬಳಿಕ ಬಾಲಕಿಯನ್ನು ಪೋಷಣೆ ಮಾಡಲು ಯಾರೂ ಇಲ್ಲದ ಪರಿಸ್ಥಿತಿಯಲ್ಲಿ, ಚಿಂಚವಾಲಿ ಗ್ರಾಮದಲ್ಲಿದ್ದ ಬಾಲಕಿಯ ಚಿಕ್ಕಮ್ಮ ಅಪರ್ಣಾ ಅನಿಲ್ ಮಕ್ವಾನಾ ಅಲಿಯಾಸ್ ಅಪರ್ಣಾ ಪ್ರಥಮೇಶ್ ಕಂಬ್ರಿ ಮತ್ತು ಆಕೆಯ ಪತಿ ಪ್ರಥಮೇಶ್ ಪ್ರವೀಣ್ ಕಂಬ್ರಿ ನೋಡಿಕೊಳ್ಳುತ್ತಿದ್ದರು.
ಬಾಲಕಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೆವು ಎಂದು ದಂಪತಿ ಹೇಳಿದ್ದರು. ಆದರೆ ವಾಸ್ತವವಾಗಿ ಬಾಲಕಿಗೆ ಹಿಂಸೆ ಮಾಡುತ್ತಿದ್ದರು, ಆಕೆ ಮಾಡಿದ ಸಣ್ಣ ತಪ್ಪಿಗಾಗಿ ಚಿಕ್ಕಪ್ಪ ಥಳಿಸಿದ್ದ. ಇದರಿಂದಾಗಿ ಬಾಲಕಿ ಮೃತಪಟ್ಟಿದ್ದಳು. ಕಳೆದ ವರ್ಷ ಬಾಲಕಿಯ ಸಂಬಂಧಿ ಜ್ಯೋತಿ ಎನ್ನುವವರು ಬಾಲಕಿಯನ್ನು ಅಪರ್ಣಾ ದಂಪತಿ ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
2024ರ ಅಕ್ಟೋಬರ್ 06ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದರು.
ಅಪರ್ಣಾ ದಂಪತಿಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಕಳೆದ ಸೋಮವಾರ ಚಿಂಚವಾಲಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿ ಅವರನ್ನು ವಶಕ್ಕೆ ಪಡೆದಿದ್ದರು, ಬಳಿಕ ತೀವ್ರವಾದ ವಿಚಾರಣೆ ನಡೆಸಿದಾಗ ದಂಪತಿ ಬಾಲಕಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಚಿಕ್ಕಪ್ಪ ಹೊಡೆದ ಪೆಟ್ಟಿನಿಂದಾಗಿ ಬಾಲಕಿ ಮೃತಪಟ್ಟಿದ್ದು, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದಿರುವುದಾಗಿ ಹೇಳಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಝೆಂಡೆ ತಿಳಿಸಿದ್ದಾರೆ.
ಸದ್ಯ ಪತ್ತೆ ಮಾಡಿದ ತಲಬುರುಡೆಯನ್ನು ವಿಧಿವಿಜ್ಞಾನ ಕೇಂದ್ರಕ್ಕೆ ರವಾನಿಸಲಾಗಿದ್ದು, ದಂಪತಿಯನ್ನು ನ್ಯಾಯಾಲಯದ ಆದೇಶದಂತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.