ನವದೆಹಲಿ: ಟಿಕೆಟ್ ಕಾಯ್ದಿರಿಸಿದ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ರೈಲು ಹೊರಡುವ 24 ಗಂಟೆಗಳ ಮುನ್ನವೇ ಸೀಟು ಹಂಚಿಕೆ ಮಾಡಿ, ಖಚಿತಪಡಿಸುವ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.
ಸದ್ಯ ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲಷ್ಟೇ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗುತ್ತಿದೆ. ಕಾಯ್ದಿರಿಸಿದ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಆಸನಗಳನ್ನು ತ್ವರಿತವಾಗಿ ಖಚಿತಪಡಿಸುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
ಪ್ರಯಾಣಿಕರಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೆ ಈ ವ್ಯವಸ್ಥೆಯನ್ನು ರೈಲ್ವೆ ನೀತಿಯ ಭಾಗವಾಗಿಸಿ, ದೇಶದಾದ್ಯಂತ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.
‘ಬಿಕಾನೇರ್ ವಿಭಾಗದಲ್ಲಿ ಈ ಪ್ರಾಯೋಗಿಕ ಯೋಜನೆಯು ಆರಂಭಗೊಂಡಿದೆ’ ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.
‘ಸೀಟು ಕಾಯ್ದಿರಿಸಿ ಟಿಕೆಟ್ ಪಡೆದಿದ್ದರೂ, ಆಸನ ಹಂಚಿಕೆಯಾಗಿ, ಖಾತರಿಯಾಗದೇ ಇರುವುದರಿಂದ ತಮ್ಮ ಪ್ರಯಾಣದ ಬಗ್ಗೆ ಅನಿಶ್ಚಿತತೆ ಹೊಂದಿದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಅವರಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದ್ದಾರೆ.
ಪ್ರಯಾಣದ ಟಿಕೆಟ್ ಖಚಿತಗೊಂಡ ನಂತರ ಪ್ರಯಾಣಿಕರು ಅದನ್ನು ರದ್ದುಗೊಳಿಸಿದರೆ, ಪಾವತಿಸಿದ ಮೊತ್ತದಲ್ಲಿ ಹೆಚ್ಚಿನ ಭಾಗವನ್ನು ಕಳೆದುಕೊಳ್ಳಲಿದ್ದಾರೆ.
ರದ್ದತಿ ನೀತಿಯ ಪ್ರಕಾರ ರೈಲು ಹೊರಡುವ 12ರಿಂದ 48 ಗಂಟೆಗೂ ಮುನ್ನ ಟಿಕೆಟ್ ರದ್ದುಗೊಳಿಸಿದರೆ ಶೇಕಡ 50ರಷ್ಟು ಹಣವನ್ನಷ್ಟೆ ಪ್ರಯಾಣಿಕರು ಪಡೆಯಲಿದ್ದಾರೆ. ನಾಲ್ಕರಿಂದ 12 ಗಂಟೆ ಮುಂಚೆ ರದ್ದುಗೊಳಿಸಿದರೆ ಶೇ 25ರಷ್ಟನ್ನು ಮಾತ್ರ ಪಡೆಯಲಿದ್ದಾರೆ.
ರದ್ದತಿಯಿಂದ ಖಾಲಿಯಾಗುವ ಆಸನಗಳನ್ನು ಬುಕಿಂಗ್ ವ್ಯವಸ್ಥೆಯ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.