ADVERTISEMENT

ರೈಲುಗಳ ಡಿಕ್ಕಿ ತಡೆಯುವ ಪರೀಕ್ಷೆ ಯಶಸ್ವಿ

ರೈಲ್ವೆ ಸಚಿವ ವೈಷ್ಣವ್, ಹಿರಿಯ ಅಧಿಕಾರಿಗಳು ರೈಲಿನಲ್ಲಿ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 16:13 IST
Last Updated 4 ಮಾರ್ಚ್ 2022, 16:13 IST
ದಕ್ಷಿಣ ಕೇಂದ್ರೀಯ ರೈಲ್ವೆಯ ಸಿಕಂದರಾಬಾದ್‌ ವಿಭಾಗದ ಲಿಂಗಂಪಲ್ಲಿ–ವಿಕಾರಾಬಾದ್‌ ಸೆಕ್ಷನ್‌ನಲ್ಲಿ ಶುಕ್ರವಾರ ಕೈಗೊಂಡಿದ್ದ ‘ರೈಲುಗಳ ಡಿಕ್ಕಿಯನ್ನು ತಡೆಯುವ ವ್ಯವಸ್ಥೆ’ಯ (ಕವಚ) ಅಳವಡಿಕೆ ಕಾರ್ಯವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲಿಸಿದರು  –ಪಿಟಿಐ ಚಿತ್ರ
ದಕ್ಷಿಣ ಕೇಂದ್ರೀಯ ರೈಲ್ವೆಯ ಸಿಕಂದರಾಬಾದ್‌ ವಿಭಾಗದ ಲಿಂಗಂಪಲ್ಲಿ–ವಿಕಾರಾಬಾದ್‌ ಸೆಕ್ಷನ್‌ನಲ್ಲಿ ಶುಕ್ರವಾರ ಕೈಗೊಂಡಿದ್ದ ‘ರೈಲುಗಳ ಡಿಕ್ಕಿಯನ್ನು ತಡೆಯುವ ವ್ಯವಸ್ಥೆ’ಯ (ಕವಚ) ಅಳವಡಿಕೆ ಕಾರ್ಯವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲಿಸಿದರು  –ಪಿಟಿಐ ಚಿತ್ರ   

ನವದೆಹಲಿ: ರೈಲುಗಳು ಡಿಕ್ಕಿಯಾಗುವುದನ್ನು ತಡೆಯುವ, ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆಯ (ಕವಚ) ಯಶಸ್ವಿ ಪರೀಕ್ಷೆಯನ್ನು ಶುಕ್ರವಾರ ನೆರವೇರಿಸಲಾಯಿತು.

ಸಿಕಂದರಾಬಾದ್‌ ಬಳಿಯ ಗುಲ್ಲಗೂಡ–ಚಿತಗಿಡ್ಡ ರೈಲು ನಿಲ್ದಾಣಗಳ ನಡುವೆ ಈ ವ್ಯವಸ್ಥೆಯ ಪರೀಕ್ಷೆಯನ್ನು ನಡೆಸಲಾಯಿತು.

ಗುಲ್ಲಗೂಡ ರೈಲು ನಿಲ್ದಾಣದಿಂದ ಹೊರಟ ರೈಲಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿದ್ದರು. ಚಿತಗಿಡ್ಡದಿಂದ ಗುಲ್ಲಗೂಡ ಕಡೆಗೆ ಚಲಿಸಿದ ರೈಲಿನಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ವಿ.ಕೆ.ತ್ರಿಪಾಠಿ ಪ್ತಯಾಣಿಸಿದರು. ಈ ರೈಲುಗಳು ಅತ್ಯಂತ ವೇಗವಾಗಿ ಚಲಿಸಿದವು. ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಲಿದೆ ಎಂಬಷ್ಟರಲ್ಲಿಯೇ, ‘ಕವಚ’ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬ್ರೇಕ್ ಹಾಕಿತು. ಆಗ ರೈಲುಗಳು 380 ಮೀಟರ್‌ಗಳ ಅಂತರದಲ್ಲಿ ನಿಲುಗಡೆಯಾದವು ಎಂದು ದಕ್ಷಿಣ ಕೇಂದ್ರೀಯ ರೈಲ್ವೆ ತಿಳಿಸಿದೆ.

ADVERTISEMENT

ರೈಲುಗಳು ‘ರೆಡ್‌ ಸಿಗ್ನಲ್‌’ ಅನ್ನು ದಾಟಿ ಚಲುಸುವುದು ಸಹ ಪರೀಕ್ಷೆಯ ಭಾಗವಾಗಿತ್ತು. ಆದರೆ, ‘ರೆಡ್‌ ಸಿಗ್ನಲ್’ ದಾಟದಂತೆ ತಡೆಯುವ ವ್ಯವಸ್ಥೆಯನ್ನು ‘ಕವಚ’ ಹೊಂದಿದ್ದು, ಅದು ತತ್‌ಕ್ಷಣವೇ ಕಾರ್ಯಪ್ರವೃತ್ತವಾಗಿ ಬ್ರೇಕ್‌ ಹಾಕಿತು.

ರೈಲ್ವೆ ಕ್ರಾಸಿಂಗ್‌ನಲ್ಲಿನ ಗೇಟ್‌ಗಳು ಸಮೀಪಿಸುತ್ತಿದ್ದಂತೆಯೇ, ಜೋರಾಗಿ ವಿಷಲ್‌ನ ಶಬ್ದ ಹೊರಹೊಮ್ಮಿಸಿದ ‘ಕವಚ’, ರೈಲು ಸಂಚರಿಸುತ್ತಿರುವ ಬಗ್ಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿತು.

ಈ ಪರೀಕ್ಷಾರ್ಥ ಸಂಚಾರ ವೇಳೆ, ಸಿಬ್ಬಂದಿಯು ಬ್ರೇಕ್‌ ಅಥವಾ ವಿಷಲ್ ಅನ್ನು ಸ್ಪರ್ಶಿಸಲಿಲ್ಲ. ರೈಲು ಮಾರ್ಗಗಳು ಒಂದನ್ನೊಂದು ಹಾಯ್ದು ಹೋಗುವ ಸ್ಥಳಗಳಲ್ಲಿ ‘ಕವಚ’ ವ್ಯವಸ್ಥೆಯು, ರೈಲುಗಳ ವೇಗವನ್ನು ಗಂಟೆಗೆ 60 ಕಿ.ಮೀ. ಇದ್ದದ್ದನ್ನು ಗಂಟೆಗೆ 30 ಕಿ.ಮೀ.ಗೆ ಸ್ವಯಂಚಾಲಿತವಾಗಿಯೇ ತಗ್ಗಿಸಿತು ಎಂದು ರೈಲ್ವೆ ತಿಳಿಸಿದೆ.

****

ಪ್ರಸಕ್ತ ಹಣಕಾಸು ವರ್ಷದಲ್ಲಿ 2,000 ಕಿ.ಮೀ. ಉದ್ದದ ಮಾರ್ಗದಲ್ಲಿ ‘ಕವಚ’ ವ್ಯವಸ್ಥೆಯನ್ನು ಅಳವಡಿಸಲಾಗುವುದು. ನಂತರ ಪ್ರತಿವರ್ಷ 5,000 ಕಿ.ಮೀ ಉದ್ದದಷ್ಟು ಮಾರ್ಗದಲ್ಲಿ ಅಳವಡಿಸಲಾಗುವುದು

ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.