ADVERTISEMENT

ಕೋವಿಡ್‍: ಸುರಕ್ಷಿತ ಪ್ರಯಾಣಕ್ಕಾಗಿ ವಿಶೇಷ ಬೋಗಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:46 IST
Last Updated 14 ಜುಲೈ 2020, 15:46 IST
ರೈಲ್ವೆ ಇಲಾಖೆಯು ರೂಪಿಸಿರುವ ನೂತನ ಬೋಗಿ
ರೈಲ್ವೆ ಇಲಾಖೆಯು ರೂಪಿಸಿರುವ ನೂತನ ಬೋಗಿ   

ನವದೆಹಲಿ: ಕೋವಿಡ್‍-19 ಅವಧಿಯ ನಂತರವು ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡಲು ರೈಲ್ವೆ ಇಲಾಖೆಯು, ಕೈ ಬದಲಾಗಿ ಕಾಲಿನಲ್ಲಿಯೇ ನಿರ್ವಹಿಸಬಹುದಾದ ಹಲವು ನೂತನ ಸೌಲಭ್ಯಗಳನ್ನು ಒಳಗೊಂಡ ಬೋಗಿಗಳನ್ನು ಪರಿಚಯಿಸಲಿದೆ.

ಕಾಲಿನಲ್ಲೇ ನಿರ್ವಹಣೆ ಮಾಡಬಹುದಾದ ಸೋಪ್‍ ಡಿಸ್ಪೆನ್ಸರ್, ಶೌಚಾಲಯದ ಫ್ಲಶ್, ಸೂಕ್ಷ್ಮಜೀವಿ ನಿರೋಧ ಕಾಪರ್ ಲೇಪಿತ ಹ್ಯಾಂಡಲ್‍ಗಳ ಬಳಕೆಯೂ ಸೇರಿ ಹಲವು ಸೌಲಭ್ಯಗಳನ್ನು ಈ ನೂತನ ಬೋಗಿಗಳಲ್ಲಿ ಅಳವಡಿಸಲಿದೆ.

ಹೊಸ ಸೌಲಭ್ಯಗಳಿರುವ ಎರಡು ಬೋಗಿಗಳನ್ನು ಕಾಪುರ್ತಲದಲ್ಲಿ ಇರುವ ರೈಲ್ವೆ ಕೋಚ್‍ ಫ‍್ಯಾಕ್ಟರಿ ರೂಪಿಸಿದೆ. ಬೋಗಿ ಒಳಾವರಣದ ಶುದ್ಧತೆಗೆ ಎ.ಸಿ ಘಟಕಗಳಲ್ಲಿ ಪ್ಲಾಸ್ಮಾ ಏರ್ ಈಕ್ವಿಪ್‍ಮೆಂಟ್‍ ಅಳವಡಿಸಲಾಗುವುದು ಎಂದು ತಿಳಿಸಿದೆ.

ADVERTISEMENT

ಕೋವಿಡ್ ಸ್ಥಿತಿ ಎದುರಿಸಲು ಇಲಾಖೆ ಸನ್ನದ್ಧವಾಗಿದೆ. ನೂತನ ಬೋಗಿಯಲ್ಲಿ ಕೈ ಸಂಪರ್ಕಕ್ಕೆ ಬಾರದೇ ಬಳಸಬಹುದಾದ ಅನೇಕ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಕೋವಿಡ್‍ ಮುಕ್ತ ಪ್ರಯಾಣಕ್ಕಾಗಿ’ ಎಂದು ರೈಲ್ವೆ ಸಚಿವ ಪಿಯೂಶ್‍ ಗೋಯಲ್‍ ಅವರು ಟ್ವೀಟ್ ಮಾಡಿದ್ದಾರೆ.

ಕಾಲಿನಲ್ಲಿ ನಿರ್ವಹಿಸಬಹುದಾದ ನಲ್ಲಿಗಳು, ಶೌಚಾಲಯದ ಬಾಗಿಲು, ಫ್ಲಶ್‍ ಹಿಡಿಗಳು, ಬಾಗಿಲ ಹಿಡಿಕೆ ಸೌಲಭ್ಯಗಳಲ್ಲಿ ಸೇರಿವೆ. ವಾಶ್ ಬೇಸಿನ್‍ ಅನ್ನು ಕಾಲಿನಲ್ಲಿಯೇ ನಿರ್ವಹಿಸಬಹುದು ಎಂದು ಇಲಾಖೆಯು ಈ ಕುರಿತ ಕೈಪಿಡಿಯಲ್ಲಿ ತಿಳಿಸಿದೆ.

ಮುಖ್ಯವಾಗಿ ಟೈಟಾನಿಯಂ ಡೈಆಕ್ಸೈಡ್‍ ಕೋಟಿಂಗ್ ಇರುವುದು ಈ ಬೋಗಿಯ ವಿಶೇಷ. ಈ ಕೋಟಿಂಗ್‍ ಸೋಂಕು, ಬ್ಯಾಕ್ಟಿರಿಯಾ ನಿರೋಧಕವಾಗಿದ್ದು, ಪಾಚಿ ಕಟ್ಟುವುದಿಲ್ಲ. ಜೊತೆಗೆ ಒಳಾವರಣದಲ್ಲಿ ಗಾಳಿಯ ಶುದ್ಧತೆಗೂ ಕಾರಣವಾಗಲಿದೆ. ಈ ಕೋಟಿಂಗ್ 12 ತಿಂಗಳು ಬಾಳಿಕೆ ಬರಲಿದೆ ಎಂದು ಇಲಾಖೆಯು ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.