ADVERTISEMENT

ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿದೆ ರೈಲ್ವೆಯ ತತ್ಕಾಲ್ ಟಿಕೆಟ್

ಪಿಟಿಐ
Published 19 ಫೆಬ್ರುವರಿ 2020, 5:28 IST
Last Updated 19 ಫೆಬ್ರುವರಿ 2020, 5:28 IST
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ    

ನವದೆಹಲಿ: ರೈಲ್ವೆ ಸುರಕ್ಷಾ ದಳವು(ಆರ್‌ಪಿಎಫ್) ತತ್ಕಾಲ್‌ ಸೇವೆಯಡಿ ರೈಲು ಟಿಕೆಟ್‌ಗಳನ್ನು ಬ್ಲಾಕ್‌ ಮಾಡಲು ಬಳಸಲಾಗುತ್ತಿದ್ದ ಅಕ್ರಮ ಸಾಫ್ಟ್‌ವೇರ್‌ಗಳನ್ನ ಕಿತ್ತು ಹಾಕಿದ್ದು ಮಾತ್ರವಲ್ಲದೆ ಟಿಕೆಟ್ ಬ್ಲಾಕ್ ಮಾಡುತ್ತಿದ್ದ 60 ಏಜೆಂಟ್‌ಗಳನ್ನು ಬಂಧಿಸಿದೆ. ಹಾಗಾಗಿ ಇನ್ನು ಮುಂದೆ ತತ್ಕಾಲ್ ಸೇವೆಯಡಿ ಹೆಚ್ಚಿನ ಟಿಕೆಟ್‌ಗಳು ಪ್ರಯಾಣಿಕರಿಗೆ ಲಭ್ಯವಾಗಲಿದೆ.

ತತ್ಕಾಲ್ ಸೇವೆಯಡಿ ಬುಕಿಂಗ್ ಆರಂಭಿಸಿದ ಕೂಡಲೇ ಟಿಕೆಟ್‌ಗಳು ಕಾಣೆಯಾಗುವಂತೆ ಮಾಡುವ ಸಾಫ್ಟ್‌ವೇರ್‌ಗಳನ್ನು ಕಿತ್ತೊಗೆಯಲಾಗಿದೆ ಎಂದು ಆರ್‌ಪಿಎಫ್ ಮಹಾ ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.

ಬಂಧಿತರಾದವರಲ್ಲಿ ಕೋಲ್ಕತ್ತ ಮೂಲದ ವ್ಯಕ್ತಿಗೆಬಾಂಗ್ಲಾದೇಶದ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಯುಎಂಬಿ) ಜತೆ ನಂಟು ಇದೆ ಎಂದು ಶಂಕಿಸಲಾಗಿದೆ.ಇ- ಟಿಕೆಟ್ ದಂಧೆಗೆ ಉಗ್ರ ಸಂಘಟನೆಗಳಿಗೆ ಹಣ ಒದಗಿಸುವ ಜಾಲದೊಂದಿಗೆ ನಂಟು ಇದೆ ಎಂದು ಆರ್‌ಪಿಎಫ್ ಮಹಾ ನಿರ್ದೇಶಕರು ಜನವರಿಯಲ್ಲಿ ಹೇಳಿದ್ದರು.

ADVERTISEMENT

ಎಎನ್‌ಎಂಸ್, ಎಂಎಸಿ ಮತ್ತು ಜಾಗ್ವಾರ್ ಮೊದಲಾದ ಅಕ್ರಮ ಸಾಫ್ಟ್‌ವೇರ್‌ಗಳು ಐಆರ್‌ಸಿಟಿಸಿ ಲಾಗಿನ್ ಕ್ಯಾಪ್ಚಾ , ಬುಕಿಂಗ್ ಕ್ಯಾಪ್ಚಾ ಮತ್ತು ಟಿಕೆಟ್ ಬುಕಿಂಗ್ ಮಾಡುವಾಗ ಸಿಗುವ ಬ್ಯಾಂಕ್ ಒಟಿಪಿ ಬಳಸದೆಯೇ ಟಿಕೆಟ್ ಬುಕಿಂಗ್ ಮಾಡುತ್ತಿದ್ದವು. ಸಾಮಾನ್ಯ ಪ್ರಯಾಣಿಕರೊಬ್ಬರು ತತ್ಕಾಲ್ ಸೇವೆಯಡಿ ಟಿಕೆಟ್ ಪಡೆಯಬೇಕಾದರೆ ಇದೆಲ್ಲ ಪ್ರಕ್ರಿಯೆಗಳನ್ನು ಅನುಸರಿಸಲೇಬೇಕು.

ಸಾಮಾನ್ಯವಾಗಿ ಬುಕಿಂಗ್ ಪ್ರಕ್ರಿಯೆಗೆ ಬೇಕಾಗುವ ಸಮಯ 2.55 ನಿಮಿಷ. ಆದರೆ ಸಾಫ್ಟ್‌ವೇರ್ ಬಳಸಿ ಬುಕಿಂಗ್ ಮಾಡುವುದಾದರೆ 1.48 ನಿಮಿಷ ಸಾಕು .

ಕಳೆದ ಎರಡು ತಿಂಗಳಿನಿಂದ ಏಜೆಂಟ್‌ಗಳಿಗೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ರೈಲ್ವೆ ಅನುಮತಿ ನೀಡುತ್ತಿಲ್ಲ.

ಅಕ್ರಮ ಸಾಫ್ಟ್‌ವೇರ್ ಬಳಸಿ ಇನ್ನು ಮುಂದೆ ಒಂದೇ ಒಂದು ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿರುವ ಎಲ್ಲ ಸಮಸ್ಯೆಗಳನ್ನು ನಾವು ಪರಿಹರಿಸಿದ್ದೆವುಎಂದು ಮಾಧ್ಯಮದವರಲ್ಲಿ ಮಾತನಾಡಿದ ಮಹಾ ನಿರ್ದೇಶಕರ ಹೇಳಿದ್ದಾರೆ.

ಈ ಅಕ್ರಮ ಸಾಫ್ಟ್‌ವೇರ್‌ಗಳು ವರ್ಷಕ್ಕೆ ₹50 ಕೋಟಿ- ₹100 ಕೋಟಿಯ ವ್ಯವಹಾರ ಮಾಡುತ್ತಿದ್ದವು ಎಂದು ಕುಮಾರ್ ಹೇಳಿದ್ದಾರೆ. ರೈಲಿನಲ್ಲಿಪ್ರಯಾಣ ಮಾಡುವ ದಿನದ 24 ಗಂಟೆಗಳ ಮುನ್ನ ತತ್ಕಾಲ್ ಸೇವೆಯಡಿ ಟಿಕೆಟ್ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.