ADVERTISEMENT

ಕ್ಲಬ್‌ ಮೇಲೆ ಪೊಲೀಸ್ ದಾಳಿ: ನಿವೃತ್ತ ಕ್ರಿಕೆಟಿಗ ರೈನಾ ಬಂಧನ, ಬಿಡುಗಡೆ

ಕೋವಿಡ್‌ ನಿಯಮಾವಳಿ ಉಲ್ಲಂಘಿಸಿದ ಆರೋಪ

ಪಿಟಿಐ
Published 22 ಡಿಸೆಂಬರ್ 2020, 17:33 IST
Last Updated 22 ಡಿಸೆಂಬರ್ 2020, 17:33 IST
ಸುರೇಶ್ ರೈನಾ
ಸುರೇಶ್ ರೈನಾ   

ಮುಂಬೈ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಐಷಾರಾಮಿ ಡ್ರ್ಯಾಗನ್‌ಫ್ಲೈ ಎಕ್ಸ್‌ಪೀರಿಯನ್ಸ್‌ ಕ್ಲಬ್‌ ಮೇಲೆ ದಾಳಿ ನಡೆಸಿರುವ ಪೊಲೀಸರು ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ, ಬಾಲಿವುಡ್‌ ಗಾಯಕ ಗುರು ರಾಂಧವ, ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರ ವಿಚ್ಛೇದಿತ ಪತ್ನಿ ಸೂಸನ್‌ ಖಾನ್‌ ಸೇರಿದಂತೆ ಒಟ್ಟು34 ಮಂದಿಯನ್ನು ಬಂಧಿಸಿದ್ದಾರೆ.

‘ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಾಗೂ ಅನುಮತಿ ಪಡೆದಿರುವ ಸಮಯ ಮೀರಿದ ನಂತರವೂ ಬಾಗಿಲು ತೆರೆದಿದ್ದ ಹಿನ್ನೆಲೆಯಲ್ಲಿ ಮುಂಜಾನೆ3 ಗಂಟೆಗೆ ದಾಳಿ ನಡೆಸಲಾಗಿತ್ತು. ಈ ವೇಳೆ34 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ13 ಮಹಿಳೆಯರು ಹಾಗೂ ಕ್ಲಬ್‌ನ ಏಳು ಸಿಬ್ಬಂದಿ ಇದ್ದಾರೆ’ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.

‘ಮಹಿಳೆಯರಿಗೆ ಸ್ಥಳದಲ್ಲೇ ನೋಟಿಸ್‌ ನೀಡಿ ಮನೆಗೆ ಕಳುಹಿಸಲಾಯಿತು. ಪುರುಷರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಐಪಿಸಿ ಸೆಕ್ಷನ್‌ 188, 269 ಹಾಗೂ34ರ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಪಾರ್ಟಿ ನಹೀ ಚಲೇಗಿ ಟಿಲ್‌ ಸಿಕ್ಸ್‌ ಇನ್‌ ದಿ ಮಾರ್ನಿಂಗ್‌! ಅಂಧೇರಿಯ ಐಷಾರಾಮಿ ಕ್ಲಬ್‌ವೊಂದರಲ್ಲಿ ಅಂತರ‌ ನಿಯಮ ಉಲ್ಲಂಘಿಸಲಾಗಿತ್ತು. ಹೀಗಾಗಿ ‌ಮುಂಜಾನೆ3 ಗಂಟೆಗೆ ಕ್ಲಬ್‌ ಮೇಲೆ ದಾಳಿ ನಡೆಸಿ34 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ19 ಮಂದಿ ನವದೆಹಲಿ ಮತ್ತು ಪಂಜಾಬ್‌ಗೆ ಸೇರಿದವರಾಗಿದ್ದಾರೆ. ಇದರಲ್ಲಿ ಕೆಲ ತಾರೆಗಳೂ ಇದ್ದಾರೆ’ ಎಂದು ಮುಂಬೈ ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಿದೆ.

‘ಶೂಟಿಂಗ್‌ವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ರೈನಾ ಮುಂಬೈಗೆ ಹೋಗಿದ್ದರು. ಶೂಟಿಂಗ್‌ ಅನ್ನು ತಡರಾತ್ರಿಯವರೆಗೂ ವಿಸ್ತರಿಸಲಾಗಿತ್ತು. ಹೀಗಾಗಿ ಸ್ನೇಹಿತರೊಬ್ಬರ ಆಹ್ವಾನದ ಮೇರೆಗೆ ಅವರು ಊಟಕ್ಕಾಗಿ ಕ್ಲಬ್‌ಗೆ ಹೋಗಿದ್ದರು. ಊಟ ಮುಗಿಸಿಕೊಂಡು ಸೀದಾ ವಿಮಾನ ನಿಲ್ದಾಣಕ್ಕೆ ಬರುವವರಿದ್ದ ಅವರು ಅಲ್ಲಿಂದ ವಿಮಾನ ಹಿಡಿದು ನವದೆಹಲಿಗೆ ಹಿಂದಿರುಗಲಿದ್ದರು’ ಎಂದು ರೈನಾ‍ಪರವಾಗಿ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.

‘ಅವಧಿ ಮೀರಿ ಕ್ಲಬ್‌ನ ಬಾಗಿಲು ತೆರೆದಿರುವುದು ರೈನಾ ಅವರಿಗೆ ಗೊತ್ತಿರಲಿಲ್ಲ. ಇದು ಅವರಿಗೆ ಅರಿವಿಲ್ಲದಂತೆ ಆಗಿರುವ ತಪ್ಪು. ರೈನಾ ಅವರು ಸರ್ಕಾರದ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಮುಂದೆಯೂ ಪಾಲಿಸಲಿದ್ದಾರೆ’ ಎಂದೂ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.