ADVERTISEMENT

ಉತ್ತರ ಪ್ರದೇಶದ ವಿವಿಧೆಡೆ ಪ್ರವಾಹ ಭೀತಿ: ಮಳೆಗೆ 18 ಸಾವು, ಜನಜೀವನ ಅಸ್ತವ್ಯಸ್ತ

ಉತ್ತರ ಪ್ರದೇಶದ ವಿವಿಧೆಡೆ ಪ್ರವಾಹದ ಭೀತಿ, ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 20:00 IST
Last Updated 12 ಜುಲೈ 2019, 20:00 IST
ಅಸ್ಸಾಂ ರಾಜ್ಯದ ಮೊರಿಗಾಂವ್‌ ಜಿಲ್ಲೆಯ ಮುರ್ಕಾಟ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ದೋಣಿಯ ಮೂಲಕ ಜನರು ಸುರಕ್ಷಿತ ತಾಣಗಳಿಗೆ ತೆರಳುತ್ತಿರುವುದು –ಎಎಫ್‌ಪಿ ಚಿತ್ರ
ಅಸ್ಸಾಂ ರಾಜ್ಯದ ಮೊರಿಗಾಂವ್‌ ಜಿಲ್ಲೆಯ ಮುರ್ಕಾಟ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ದೋಣಿಯ ಮೂಲಕ ಜನರು ಸುರಕ್ಷಿತ ತಾಣಗಳಿಗೆ ತೆರಳುತ್ತಿರುವುದು –ಎಎಫ್‌ಪಿ ಚಿತ್ರ   

ಲಖನೌ: ನಿರಂತರ ಹಾಗೂ ಧಾರಾಕಾರ ಮಳೆಯಿಂದಾಗಿ ಉತ್ತರ ಪ್ರದೇಶದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಮಳೆಯಿಂದಾದ ಅವಘಡಗಳಿಂದಾಗಿ ಮಕ್ಕಳು ಸೇರಿದಂತೆ 18 ಜನರು ಸತ್ತಿದ್ದಾರೆ.

ಕಳೆದೆರಡು ದಿನಗಳಿಂದ ರಾಜ್ಯದ ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಲವೆಡೆ ಮನೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಯು ಜಖಂಗೊಂಡಿದ್ದು, ವ್ಯಾಪಕ ಬೆಳೆ ಹಾನಿಯೂ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಮನೆಗಳ ಕುಸಿತದಿಂದಾಗಿ ರಾಜ್ಯದ ಬಾರಾಬಂಕಿ, ಸೀತಾಪುರ, ಬಹರೈಚ್, ರಾಯಬರೇಲಿ, ಅಂಬೇಡ್ಕರ್‌ ನಗರ ಜಿಲ್ಲೆಗಳಲ್ಲಿ ಮಕ್ಕಳು ಸೇರಿದಂತೆ 12 ಜನರು ಸತ್ತಿದ್ದಾರೆ.

ಪ್ರಯಾಗ್‌ರಾಜ್, ಮಿರ್ಜಾಪುರ್, ವಾರಾಣಸಿ, ರಾಯಬರೇಲಿ ಪಟ್ಟಣಗಳ ತಗ್ಗು ಪ್ರದೇಶಗಳಲ್ಲಿ ಮಂಡಿಯವರೆಗೂ ನೀರು ನಿಂತಿದೆ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳಲು ದೋಣಿಯ ನೆರವು ಪಡೆಯುತ್ತಿದ್ದಾರೆ.

ADVERTISEMENT

ರೈಲು, ವಿಮಾನ ವಿಳಂಬ: ಧಾರಾಕಾರ ಮಳೆಯು ರೈಲು, ವಿಮಾನ ಸೇವೆಯ ಮೇಲೂ ಪರಿಣಾಮ ಬೀರಿದೆ. ಪ್ರವಾಹದ ಎಚ್ಚರಿಕೆ: ಮಳೆಯ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಅಯಾ
ಜಿಲ್ಲಾಡಳಿತಗಳು ಪ್ರವಾಹದ ಎಚ್ಚರಿಕೆ ನೀಡಿವೆ.

ಅಸ್ಸಾಂ:800 ಗ್ರಾಮ ಮುಳುಗಡೆ
ಗುವಾಹಟಿ: ಅಸ್ಸಾಂನಲ್ಲಿ ಬ್ರಹ್ಮಪುತ್ರ ಮತ್ತು ಅದರ ಉಪ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಮಳೆ ಅವಘಡದಿಂದ ಮೂವರು ಸತ್ತಿದ್ದು, 4.23 ಲಕ್ಷ ಜನರು ಅತಂತ್ರರಾಗಿದ್ದಾರೆ.

ರಾಜ್ಯದಲ್ಲಿ ಮೂಡಿರುವ ಪ್ರವಾಹದ ಸ್ಥಿತಿಯಿಂದಾಗಿ ರೈಲು ಸಂಚಾರ ಹಳಿತಪ್ಪಿದೆ. ಲುಮ್‌ಡಿಂಗ್–ಬಡಾರ್‌ಪುರ ಬೆಟ್ಟ ಪ್ರದೇಶದಲ್ಲಿ ಹಳಿಗಳು ಹಾಳಾಗಿವೆ. ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 800 ಗ್ರಾಮಗಳು ಮುಳುಗಡೆಯಾಗಿವೆ. 2,000 ಜನರನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಿದ್ದು, ಸಂತ್ರಸ್ತರಿಗೆ ಆಶ್ರಯ ಒದಗಿಸಲು 53 ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ರಾಷ್ಟ್ರೀಯ ಉದ್ಯಾನಕ್ಕೂ ಧಕ್ಕೆ: ಭಾರತೀಯ ಘೇಂಡಾಮೃಗದ ಆಶ್ರಯತಾಣವಾಗಿರುವ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಕಾಜಿರಂಗಾ ರಾಷ್ಟ್ರೀಯ ಉದ್ಯಾನದ ಮೇಲೂ ಮಳೆಯ ಪರಿಣಾಮವಾಗಿದ್ದು, ಸದ್ಯ ಮುಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.