ADVERTISEMENT

ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತಾಡಿ: ಕಾಂಗ್ರೆಸ್ ಸಂಸದರಿಗೆ ಸೋನಿಯಾ ಸಲಹೆ

ಏಜೆನ್ಸೀಸ್
Published 28 ಜನವರಿ 2020, 2:43 IST
Last Updated 28 ಜನವರಿ 2020, 2:43 IST
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ   

ನವದೆಹಲಿ: ಸಾಮಾನ್ಯ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ. ಅದರ ಬಗ್ಗೆ ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಜನರ ಸಮಸ್ಯೆಗಳನ್ನು ಪ್ರಬಲವಾಗಿ ಪ್ರಸ್ತಾಪಿಸಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ.

ಸಂಸತ್ತಿನ ಎರಡೂ ಸದನಗಳಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಇರುವ ಸಾಧ್ಯತೆಗಳ ಬಗ್ಗೆ ಪಕ್ಷದ ಕಾರ್ಯತಂತ್ರ ರೂಪಿಸಲುಸೋನಿಯಾಗಾಂಧಿ ತಮ್ಮ ನಿವಾಸದಲ್ಲಿ ಸೋಮವಾರ ಪಕ್ಷದ ಸಂಸದೀಯ ಕಾರ್ಯತಂತ್ರ ಸಮಿತಿಯೊಂದಿಗೆಸುದೀರ್ಘ ಚರ್ಚೆ ನಡೆಸಿದರು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ದನಿಯೆತ್ತಿ ಎಂದು ಸೋನಿಯಾ ಈ ಸಂದರ್ಭ ಸಲಹೆ ನೀಡಿದರು.

ADVERTISEMENT

‘ಜನರ ಸಮಸ್ಯೆಗಳತ್ತ ಭಾರತ ಸರ್ಕಾರ ಗಮನ ನೀಡಬೇಕು. ಎಲ್ಲಾ ವಿರೋಧ ಪಕ್ಷಗಳು, ಮುಖ್ಯವಾಗಿ ಯುಪಿಎ ಮಿತ್ರಪಕ್ಷಗಳನ್ನು ಈ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಸೂನಿಯಾ ಸೂಚಿಸಿದರು.

‘ಪೌರತ್ವ ಕಾಯ್ದೆ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ, ರಾಷ್ಟ್ರೀಯ ನಾಗರಿಕ ನೋಂದಣಿ, ನಿರುದ್ಯೋಗ, ಆರ್ಥಿಕ ಕುಸಿತದ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಲು ವಿರೋಧ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ’ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ‘ನಾವು ಪೌರತ್ವ ಕಾಯ್ದೆ ವಿರುದ್ಧ ಹೋರಾಡುತ್ತೇವೆ. ಸಂವಿಧಾನ ಮತ್ತು ಅರ್ಥ ವ್ಯವಸ್ಥೆ ರಕ್ಷಿಸಲು ಶ್ರಮಿಸುತ್ತೇವೆ. ಈ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ’ ಎಂದು ಹೇಳಿದರು.

ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಮನೀಶ್ ತಿವಾರಿ, ಜೈರಾಂ ರಮೇಶ್, ಗೌರವ್ ಗೊಗೊಯ್, ಕೆ.ಸುರೇಶ್, ಅಹ್ಮದ್ ಪಟೇಲ್, ಕೆ.ಸಿ.ವೇಣುಗೋಪಾಲ್ ಮತ್ತು ಮಾಣಿಕ ಟಾಗೋರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.