ADVERTISEMENT

ಹನಿಮೂನ್‌ ಹತ್ಯೆ: ಮಹಿಳೆಯ ಕೊಂದು ಸೋನಮ್‌ ಶವವೆಂದು ಬಿಂಬಿಸಲು ಯೋಜನೆ!

ಹನಿಮೂನ್‌ ಹತ್ಯೆ ಪ್ರಕರಣ

ಪಿಟಿಐ
Published 13 ಜೂನ್ 2025, 15:55 IST
Last Updated 13 ಜೂನ್ 2025, 15:55 IST
ಸೋನಮ್‌ ಹಾಗೂ ರಾಜ ರಘುವಂಶಿ
ಸೋನಮ್‌ ಹಾಗೂ ರಾಜ ರಘುವಂಶಿ   

ಶಿಲ್ಲಾಂಗ್: ಬೇರೊಂದು ಮಹಿಳೆಯನ್ನು ಹತ್ಯೆ ಮಾಡಿ, ದೇಹವನ್ನು ಸುಟ್ಟು, ಅದು ರಘುವಂಶಿ ಪತ್ನಿ ಸೋನಮ್‌ ಶವ ಎಂದು ಬಿಂಬಿಸಲು, ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿಯನ್ನು ಹತ್ಯೆಗೈದ ಆರೋಪಿಗಳು ಆಲೋಚಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. 

ಸೋನಮ್‌ ಪ್ರಿಯಕರ ರಾಜ್‌ ಕುಶ್ವಾಹ ಕೊಲೆಯ ಪ್ರಮುಖ ಸಂಚುಕೋರನಾಗಿದ್ದ ಎಂಬುದು ಗೊತ್ತಾಗಿದೆ. ರಘುವಂಶಿ ಹತ್ಯೆಗೆ ಫೆಬ್ರುವರಿಯಿಂದಲೇ ಆರೋಪಿಗಳು ಸಂಚು ರೂಪಿಸತೊಡಗಿದ್ದರು. ಕೊಲೆ ಬಳಿಕ ಸೋನಮ್‌ ಹೇಗೆ ಬಚಾವಾಗಬೇಕು ಎಂಬುದರ ಕುರಿತು ಹಲವು ಯೋಜನೆ ರೂಪಿಸಿದ್ದರು. ‘ಸೋನಮ್‌ ನದಿಯಲ್ಲಿ ಕೊಚ್ಚಿಹೋದಳು ಎಂದು ನಂಬಿಸುವುದು ಹಾಗೂ ಇನ್ನೊಬ್ಬ ಮಹಿಳೆಯ ದೇಹವನ್ನು ಸುಟ್ಟು ಅದು ಸೋನಮ್‌ ಎಂದು ಬಿಂಬಿಸಬೇಕೆಂದುಕೊಂಡಿದ್ದರು’ ಎಂದು ಮೇಘಾಲಯ ಪೊಲೀಸರು ತಿಳಿಸಿದರು. 

ಪ್ರಿಯಕರ ಮತ್ತು ಸಹಚರರು ತನ್ನ ಪತಿಯನ್ನು ಹತ್ಯೆ ಮಾಡಿದ ಬಳಿಕ ಸೋನಮ್‌, ಬುರ್ಖಾ ಧರಿಸಿ ಮೇಘಾಲಯದಿಂದ ಮಧ್ಯಪ್ರದೇಶಕ್ಕೆ ತೆರಳಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ರಾಜಾ ರಘುವಂಶಿಯನ್ನು ಹತ್ಯೆ ಮಾಡುವ ಸಂಚನ್ನು ಆರೋಪಿ ರಾಜ್‌ ಕುಶ್ವಾಹ ಮದುವೆಗೂ ಮುನ್ನ ರೂಪಿಸಿದ್ದ. 

ADVERTISEMENT

ರಾಜಾ ರಘುವಂಶಿ, ಸೋನಮ್ ಮೇ 11ರಂದು ವಿವಾಹವಾಗಿದ್ದರು. ಮಧುಚಂದ್ರಕ್ಕಾಗಿ ಮೇಘಾಲಯಕ್ಕೆ ತೆರಳಿದ್ದಾಗ ಮೇ 23ರಿಂದ ದಂಪತಿ ನಾಪತ್ತೆಯಾಗಿದ್ದರು. ಜೂನ್‌ 2ರಂದು ರಘುವಂಶಿ ಅವರ ಶವ ಶಿಲ್ಲಾಂಗ್‌ ಸಮೀಪದ ಜಲಪಾತದ ಕಮರಿಯಲ್ಲಿ ಸಿಕ್ಕಿತ್ತು. ಸೋನಮ್‌ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದರು.

ಸೋನಮ್‌ ಹಾಗೂ ಪ್ರಿಯಕರ ರಾಜ್‌, ರಾಜ ರಘುವಂಶಿಯ ಹತ್ಯೆಗೆ ಸುಪಾರಿ ನೀಡಿದ್ದರು ಎಂಬುದು ನಂತರ ಬೆಳಕಿಗೆ ಬಂದಿತು. ಇವರಿಬ್ಬರು ಹಾಗೂ ಕೊಲೆ ಆರೋಪಿಗಳಾದ ವಿಶಾಲ್‌, ಆಕಾಶ್‌, ಆನಂದ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. 

‘ಆರೋಪಿಗಳ ಮಂಪರು ಪರೀಕ್ಷೆ ನಡೆಸಿ’

ಇಂದೋರ್‌ (ಪಿಟಿಐ): ಪ್ರಕರಣದ ಹಿಂದಿನ ಸಂಪೂರ್ಣ ಸತ್ಯ ತಿಳಿಯಬೇಕಾದರೆ ಪ್ರಮುಖ ಆರೋಪಿಗಳಾದ ಸೋನಮ್‌ ಹಾಗೂ ರಾಜ್‌ ಕುಶ್ವಾಹ ಅವರ ಮಂಪರು ಪರೀಕ್ಷೆ ನಡೆಸಬೇಕೆಂದು ರಾಜ ರಘುವಂಶಿಯವರ ಹಿರಿಯ ಸಹೋದರ ಸಚಿನ್ ರಘುವಂಶಿ ಆಗ್ರಹಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್‌ ‘ಸೋನಮ್‌ ಹಾಗೂ ರಾಜ್‌ ಕುಶ್ವಾಹ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಹತ್ಯೆಯ ಮಾಸ್ಟರ್‌ಮೈಂಡ್‌ ಯಾರೆಂದು ಪರಸ್ಪರ ಆರೋಪಿಸುತ್ತಿದ್ದಾರೆ. ಇವರಿಬ್ಬರೇ ಕೊಲೆ ಸಂಚು ರೂಪಿಸಲು ಸಾಧ್ಯವಿಲ್ಲ. ಇದರಲ್ಲಿ ಇನ್ನೂ ಹೆಚ್ಚು ಜನರು ಭಾಗಿಯಾಗಿದ್ದಾರೆ ಎಂದು ಭಾವಿಸುತ್ತೇನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.