ADVERTISEMENT

ಮಸೀದಿಯ ಧ್ವನಿವರ್ಧಕ ಸದ್ದಿನ ಮೇಲೆ ರಾಜ್ ಠಾಕ್ರೆ ಕೆಂಗಣ್ಣು

ಪಿಟಿಐ
Published 4 ಏಪ್ರಿಲ್ 2022, 6:59 IST
Last Updated 4 ಏಪ್ರಿಲ್ 2022, 6:59 IST
ರಾಜ್ ಠಾಕ್ರೆ
ರಾಜ್ ಠಾಕ್ರೆ   

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ (ಎಂಎನ್‌ಎಸ್‌) ರಾಜ್ ಠಾಕ್ರೆ ಅವರು ಆಡಳಿತಾರೂಢ ಎಂವಿಎ ಸರ್ಕಾರದ ಮೇಲೆ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಇದು ಮೈತ್ರಿಕೂಟದ ಕೆಂಗಣ್ಣಿಗೆ ಕಾರಣವಾಗಿದೆ.

ತಮ್ಮ ಸಹೋದರ ಸಂಬಂಧಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಕಟುವಾಗಿ ಟೀಕಿಸಿರುವ ರಾಜ್, ‘2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಶಿವಸೇನೆ ಸರ್ಕಾರ ರಚಿಸಬೇಕೆಂಬ ತೀರ್ಮಾನವನ್ನು ಜನ ಮಾಡಿದ್ದರು. ಆದರೆ, ನೀವು ವಿಭಜಕ ಶಕ್ತಿಗಳ ಜೊತೆ ಸೇರಿಕೊಂಡು ಅಧಿಕಾರದ ಆಸೆಗಾಗಿ ಮೈತ್ರಿಕೂಟ ರಚಿಸಿಕೊಂಡಿರಿ’ ಎಂದಿದ್ದಾರೆ.

‘ಚುನಾವಣೆಗೂ ಮುನ್ನ ಅಧಿಕಾರ ಹಂಚಿಕೆಗಾಗಿ ಮೋದಿ ಹಾಗೂ ಶಾ ಜೊತೆ ಮಾತುಕತೆ ಮಾಡಿದ್ದು ನೀವೆ (ಉದ್ಧವ್) ಆದರೆ, ಜನರ ತೀರ್ಮಾನವನ್ನು ಬದಿಗಿಟ್ಟು ನೀವು ಹಿಂದೂಗಳ ಪರ ಅಲ್ಲ, ಅಧಿಕಾರದ ಪರ ಎಂಬುದನ್ನು ತೋರಿಸಿದ್ದಿರಿ’ ಎಂದು ಹರಿಹಾಯ್ದಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ 2019 ರ ವಿಧಾನಸಭೆ ಚುನಾವಣೆ ಬಳಿಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಸೇರಿಕೊಂಡು ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟದಡಿ ಸರ್ಕಾರ ರಚನೆಯಾಗಿತ್ತು.

‘ಶಿವಸೇನೆ ನೇತೃತ್ವದ ಎಂವಿಎ ಸರ್ಕಾರ ಹಿಂದೂಗಳ ರಕ್ಷಣೆ ಮಾಡುವಲ್ಲಿ ಸೋತಿದೆ. ಹಿಂದೂಗಳ ರಕ್ಷಣೆಯಾಗಬೇಕಾದರೆ ಎಂಎನ್‌ಎಸ್‌ಗೆ ಅಧಿಕಾರ ನೀಡಿ’ ಎಂದು ಜನರಲ್ಲಿ ರಾಜ್ ಠಾಕ್ರೆ ಮನವಿ ಮಾಡಿದ್ದಾರೆ.

‘ಮುಸ್ಲಿಂ ಸಮುದಾಯದವರು ಧ್ವನಿವರ್ಧಕಗಳ ಮೂಲಕ ಮಸೀದಿಗಳಲ್ಲಿಆಜಾನ್ ನುಡಿಸುತ್ತಿರುವುದು ಸರಿಯಲ್ಲ. ಅವರು ಬದಲಾಗದಿದ್ದರೆ ಮಸೀದಿಗಳ ಮುಂದೆ ಅವರ ಧ್ವನಿವರ್ಧಕದ ಎರಡುಪಟ್ಟು ಹನುಮಾನ್ ಚಾಲೀಸಾಹಾಕ್ತಿವಿ’ ಎಂದು ಕರೆ ಕೊಟ್ಟಿದ್ದಾರೆ.

ಇನ್ನು ರಾಜ್‌ ಠಾಕ್ರೆ ಅವರ ಈ ಟೀಕೆಗಳ ಸುರಿಮಳೆಗೆ ಎಂವಿಎ ಮುಖಂಡರು ತಿರುಗೇಟು ನೀಡಿದ್ದು, ‘ರಾಜ್ ಠಾಕ್ರೆ ಬಿಜೆಪಿ ಕೊಟ್ಟ ಭಾಷಣವನ್ನು ಗಿಳಿಪಾಠ ಮಾಡಿದ್ದಾರೆ. ಅವರು ಬಿಜೆಪಿಯ ಸಿ ಟೀಂ ಆಗಲು ತಯಾರಿ ನಡೆಸುತ್ತಿದ್ದಾರೆ’ ಎಂದಿದ್ದಾರೆ.

ಶರದ್ ಪವಾರ್ ಅವರ ಬಗ್ಗೆ ಕೊಂಕು ಮಾತನಾಡುತ್ತಿರುವ ರಾಜ್ ಕೆಲದಿನಗಳ ಹಿಂದೆ ಅವರ ಕಾಲು ಹಿಡಿದುಕೊಳ್ಳಲು ಹೋಗಿದ್ದೇಕೆ? ಎಂದು ಎನ್‌ಸಿಪಿ ನಾಯಕರು ಪ್ರಶ್ನಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ ಠಾಕ್ರೆ ಅವರ ಪಕ್ಷ ಕೇವಲ ಒಂದೇ ಸೀಟನ್ನು ಪಡೆದಿತ್ತು. ನಂತರದಲ್ಲಿ ಅವರ ಮೇಲೆ ಇ.ಡಿ ಹಾಗೂ ಐ.ಟಿ ದಾಳಿಯಾಗಿತ್ತು. ಇಂದಿಗೂ ಕೂಡ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.