ADVERTISEMENT

ಪ್ರಧಾನಿ ಮೋದಿಯನ್ನು ಕೊಲೆ ಮಾಡಲು ಸಿದ್ದರಾಗಿ...: ಮ.ಪ್ರ ಕಾಂಗ್ರೆಸ್ ಶಾಸಕ ವಿವಾದ

ಮೋದಿ ಚುನಾವಣೆಯನ್ನು ನಿಲ್ಲಿಸುತ್ತಾರೆ. ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜನೆ ಮಾಡುತ್ತಾರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2022, 8:24 IST
Last Updated 12 ಡಿಸೆಂಬರ್ 2022, 8:24 IST
ನರೇಂದ್ರ ಮೋದಿ (ಕಡತ ಚಿತ್ರ)
ನರೇಂದ್ರ ಮೋದಿ (ಕಡತ ಚಿತ್ರ)   

ಭೋ‍ಪಾಲ್‌: ಸಂವಿಧಾನವನ್ನು ರಕ್ಷಣೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಿದ್ಧರಾಗಿ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕರೊಬ್ಬರು ವಿವಾದ ಸೃಷ್ಠಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವರೂ ಆದ ರಾಜ ಪಟೇರಿಯಾ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅವರು ಮಾತನಾಡಿರುವವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟೀಕೆಗಳು ಕೇಳಿ ಬರುತ್ತಿವೆ.

ADVERTISEMENT

‘ಮೋದಿ ಚುನಾವಣೆಯನ್ನು ನಿಲ್ಲಿಸುತ್ತಾರೆ. ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಬದುಕು ಅಪಾಯದಲ್ಲಿದೆ. ಸಂವಿಧಾನ ಉಳಿಯಬೇಕಿದ್ದರೆ, ಮೋದಿಯನ್ನು ಕೊಲೆ ಮಾಡಲು ಸಜ್ಜಾಗಿರಿ‘ ಎಂದು ಅವರು ಕರೆ ನೀಡಿದ್ದು ವಿಡಿಯೊದಲ್ಲಿ ದಾಖಲಾಗಿದೆ.

ಇದು ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.

ಬಳಿಕ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿರುವ ಅವರು, ‘ನಾನು ಇಲ್ಲಿ ಹತ್ಯೆ ಎನ್ನುವ ಪದವನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದೇನೆ. ನಾನು ಮಹಾತ್ಮಾ ಗಾಂಧಿಯ ಅನುಯಾಯಿಯಾಗಿದ್ದು, ಅಲ್ಪಸಂಖ್ಯಾತರನ್ನು ಉಳಿಸಬೇಕಿದ್ದರೆ, ‍ಪ್ರಧಾನಿ ನರೇಂದ್ರ ಮೋದಿಯನ್ನು ಚುನಾವಣೆಯಲ್ಲಿ ಸೋಲಿಸಬೇಕಾಗಿದೆ‘ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ನಿರ್ದೇಶನದಂತೆ, ರಾಜ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರುವಿಟ್ಟಿದ್ದಾರೆ.

‘ಇಂಥ ಹೇಳಿಕೆಗಳು, ಈಗಿನ ಕಾಂಗ್ರೆಸ್‌ ಮಹಾತ್ಮಾ ಗಾಂಧಿ ಅವರ ಕಾಂಗ್ರೆಸ್‌ ಅಲ್ಲ ಎನ್ನುವುದನ್ನು ತೋರಿಸುತ್ತದೆ. ಇದು ಮುಸಲೋನಿಮನಸ್ಥಿತಿಯ ಇಟಲಿ ಕಾಂಗ್ರೆಸ್‌‘ ಎಂದು ನರೋತ್ತಮ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅವರು, ರಾಜಾ ಪಟೇರಿಯಾ ಅವರ ಹೇಳಿಕೆಯನ್ನು ಖಂಡಿಸಿದ್ದು, ಇದು ಕ್ಷಮಿಸಲಾರದ ಅಪರಾಧ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.