ಅಯೋಧ್ಯೆಯ ಶ್ರೀರಾಮ ಮಂದಿರ ಸಂಕೀರ್ಣದ ಮೊದಲ ಮಹಡಿಯಲ್ಲಿ ಗುರುವಾರ ನೆರವೇರಿದ ‘ಶ್ರೀರಾಮ ದರ್ಬಾರ’ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೇವತಾ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು –
ಪಿಟಿಐ ಚಿತ್ರ
ಅಯೋಧ್ಯೆ: ರಾಮ ದೇವರು ರಾಜನ ಸ್ವರೂಪದಲ್ಲಿರುವ ‘ರಾಜಾ ರಾಮ’ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಇಲ್ಲಿ ಗುರುವಾರ ವಿಧ್ಯುಕ್ತವಾಗಿ ನೆರವೇರಿತು. ಶ್ರೀರಾಮ ಮಂದಿರ ದೇಗುಲ ಸಂಕೀರ್ಣದಲ್ಲಿ, ಅತ್ಯಂತ ಮಂಗಳಕರ ಎಂದು ಭಾವಿಸಲಾದ ಅಭಿಜಿನ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿತು.
ಇದೇ ಸಂಕೀರ್ಣದಲ್ಲಿರುವ ಎಂಟು ದೇವಸ್ಥಾನಗಳಲ್ಲಿ ಕೂಡ ವಿವಿಧ ದೇವತಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕೂಡ ಇದೇ ಸಂದರ್ಭದಲ್ಲಿ ನೆರವೇರಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪೂಜೆ ನೆರವೇರಿಸಿದರು.
ಕಳೆದ ವರ್ಷ ಜನವರಿ 22ರಂದು, ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆದಿತ್ತು. ಇಂದು ಎರಡನೇ ಪ್ರಮುಖ ಪ್ರಾಣ ಪ್ರತಿಷ್ಠಾಪನೆಗೆ ರಾಮ ಮಂದಿರ ಸಂಕೀರ್ಣ ಸಾಕ್ಷಿಯಾಯಿತು.
ಧಾರ್ಮಿಕ ವಿಧಿಗಳು: ‘ಯಜ್ಞ ಮಂಟಪ’ದಲ್ಲಿ ಬೆಳಿಗ್ಗೆ 6.30ಕ್ಕೆ ಪ್ರಾರ್ಥನೆಗಳೊಂದಿಗೆ ವಿವಿಧ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಚಾಲನೆ ದೊರೆಯಿತು. ನಂತರ, 9.30ಕ್ಕೆ ಹವನ, ನಂತರ ಏಕಕಾಲಕ್ಕೆ ಎಲ್ಲ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿಗಳು ನಡೆದವು. ನೇರ ಪ್ರಸಾರದಲ್ಲಿ ದೊಡ್ಡ ಪರದೆಗಳಲ್ಲಿ ಮೂಡಿಬಂದ ಪೂಜಾ ಕಾರ್ಯಕ್ರಮಗಳನ್ನು ಜನರು ಕಣ್ತುಂಬಿಕೊಂಡರು.
ಬಾಲ ರಾಮನ ಮೂರ್ತಿಯ ದರ್ಶನ ಪಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ನಂತರ ಮೊದಲ ಮಹಡಿಗೆ ತೆರಳಿ ‘ರಾಮನ ದರ್ಬಾರ’ದ ದರ್ಶನ ಪಡೆದರು. ಬಳಿಕ, ದೇಗುಲ ಸಂಕೀರ್ಣ ಸನಿಹದಲ್ಲಿರುವ ಹನುಮಾನ್‌ಗಢಿಗೂ ಭೇಟಿ ನೀಡಿದರು.
‘ರಾಮ ದೇವರು ಜನಿಸಿದ ಈ ಪವಿತ್ರಭೂಮಿಯಲ್ಲಿ ವಿವಿಧ ದೇವತಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವ ಪುಣ್ಯ ನಮಗೆ ಲಭಿಸಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಮಂಗಳಕರ ಸಂದರ್ಭವು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಹಾಗೂ ಸಿಯಾವರ್ ಶ್ರೀರಾಮಚಂದ್ರನ ವಿಜಯದ ಅಭಿವ್ಯಕ್ತಿಯಾಗಿದೆ’ ಎಂದೂ ಹೇಳಿದ್ದಾರೆ.
ಈ ಕುರಿತು ಬಿಜೆಪಿ ಕೂಡ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು,‘ಅಯೋಧ್ಯೆಯಲ್ಲಿ ಇಂದು ಎರಡನೇ ಪ್ರಾಣ ಪ್ರತಿಷ್ಟಾಪನೆ ಮುಕ್ತಾಯಗೊಂಡಿದ್ದು, ರಾಮ ರಾಜ್ಯ ನಿರ್ಮಾಣದತ್ತ ಒಂದು ಹೆಜ್ಜೆ ಇಟ್ಟಂತಾಗಿದೆ’ ಎಂದು ಹೇಳಿದೆ.
ದೇವತಾ ಮೂರ್ತಿಗಳ ಪ್ರತಿಷ್ಠಾಪನೆ
ರಾಜಾಂಗಣದಲ್ಲಿ ಶ್ರೀರಾಮ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಈಶಾನ್ಯ ಮೂಲೆಯಲ್ಲಿ ಶೇಷಾವತಾರ ಹಾಗೂ ಶಿವನ ಮೂರ್ತಿಗಳು ಆಗ್ನೇಯ ಮೂಲೆಯಲ್ಲಿ ಗಣೇಶ ದಕ್ಷಿಣದಲ್ಲಿ ಹನುಮಾನ್ ನೈರುತ್ಯದಲ್ಲಿ ಸೂರ್ಯದೇವರು ವಾಯವ್ಯ ಮೂಲೆಯಲ್ಲಿ ಭಗವತಿ ದೇವಿ ಹಾಗೂ ಉತ್ತರದಲ್ಲಿ ದೇವಿ ಅನ್ನಪೂರ್ಣಾ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ‘ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ವೈದಿಕ ಸಂಪ್ರದಾಯದಂತೆ ನೆರವೇರಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪಂಡಿತರು ಎಲ್ಲ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ‘ಗಂಗಾ ದಶಹರ ದಿನವೇ ಪ್ರಾಣ ಪ್ರತಿಷ್ಠಾಪನೆ ನೆರವೇರಿರುವುದು ಹೊಸ ಆರಂಭದ ಸಂಕೇತವೆನಿಸಿದೆ. ಶತಮಾನಗಳ ತಪಸ್ಸು ಹೋರಾಟ ಹಾಗೂ ನಂಬಿಕೆಗಳು ಸಾಕಾರಗೊಂಡ ಕ್ಷಣವೂ ಇದಾಗಿದು’ ಎಂದು ಹೇಳಿದ್ದಾರೆ.
ಈ ವರ್ಷದ ಗಂಗಾ ದಶಹರವು ಪವಿತ್ರವಷ್ಟೇ ಅಲ್ಲ ಐತಿಹಾಸಿಕ ಮಹತ್ವವನ್ನೂ ಹೊಂದಿದೆ. 500 ವರ್ಷಗಳ ಸುದೀರ್ಘ ಹೋರಾಟದ ನಂತರ ‘ರಾಜಾ ರಾಮ‘ ಸ್ವರೂಪದ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯನ್ನು ಅಯೋಧ್ಯೆಯ ಭವ್ಯ ಮಂದಿರದಲ್ಲಿ ನೆರವೇರಿಸಲಾಗಿದೆಮಹಂತ ರಘುವರ ಶರಣ ರಸಿಕ ನಿವಾಸ ದೇವಸ್ಥಾನದ ಮುಖ್ಯ ಅರ್ಚಕ
ಗಂಗಾ ದಶಹರದಂದು ನೆರವೇರಿಸಲಾಗುವ ಯಾವುದೇ ಕಾರ್ಯದಿಂದ ಹಲವು ಪಟ್ಟು ಪ್ರತಿಫಲ ಲಭಿಸುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಈ ದಿನವೇ ‘ರಾಜಾ ರಾಮ’ನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಟ್ರಸ್ಟ್ ನಿರ್ಧರಿಸಿರಬಹುದುಪಂಡಿತ ಕಲ್ಕಿ ರಾಮ ಅಯೋಧ್ಯೆ ಮೂಲದ ವಿದ್ವಾಂಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.