ದೆಹಲಿ ಬಳಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿ ನಾಲ್ವರ ಎನ್‌ಕೌಂಟರ್
ನವದೆಹಲಿ: ದೆಹಲಿಯ ದಕ್ಷಿಣ ಭಾಗವಾದ ರೋಹಿಣಿ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿ ನಾಲ್ವರನ್ನು ಹತ್ಯೆ ಮಾಡಲಾಗಿದೆ.
ದೆಹಲಿ ಪೊಲೀಸ್ ಹಾಗೂ ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ಇದಾಗಿತ್ತು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು, ಅಭ್ಯರ್ಥಿಗಳಿಗೆ ಬೆದರಿಕೆಗಳನ್ನು ಹಾಕಲು ರಾಜನ್ ಪಾಠಕ್ ಹಾಗೂ ಅವನ ತಂಡ ಕ್ರಿಯಾಶೀಲವಾಗಿತ್ತು. ಇವರ ಬಂಧನಕ್ಕೆ ಬಿಹಾರ ಪೊಲೀಸರು ಕಳೆದ ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು.
ಇಂದು ಬೆಳಗಿನ ಜಾವ 2.30ಕ್ಕೆ ರೋಹಿಣಿಯ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ, ರಾಜನ್ ಹಾಗೂ ಆತನ ಸಹಚರರು ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿ ಎನ್‌ಕೌಂಟರ್ ಮಾಡಿದ್ದಾರೆ.
ಗಂಭಿರವಾಗಿ ಗಾಯಗೊಂಡಿದ್ದ ನಾಲ್ವರೂ ರೌಡಿಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ.
ಬಿಹಾರದಲ್ಲಿ ರಾಜನ್ ಪಾಠಕ್ ಹಾಗೂ ಆತನ ಸಹಚರರ ಮೇಲೆ ಅನೇಕ ಕೊಲೆ, ಬೆದರಿಕೆ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳು ದಾಖಲಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.