ADVERTISEMENT

ರೋಗದ ಬಗ್ಗೆ ಗಮನ ಸೆಳೆಯಲು ದನವನ್ನೇ ವಿಧಾನಸಭೆಗೆ ತಂದ ರಾಜಸ್ಥಾನ ಬಿಜೆಪಿ ಶಾಸಕ

ಪಿಟಿಐ
Published 19 ಸೆಪ್ಟೆಂಬರ್ 2022, 12:26 IST
Last Updated 19 ಸೆಪ್ಟೆಂಬರ್ 2022, 12:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ಜಾನುವಾರುಗಳ ಚರ್ಮರೋಗದ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಬಿಜೆಪಿ ಶಾಸಕರೊಬ್ಬರು ಸೋಮವಾರ ದನದೊಂದಿಗೆ ರಾಜಸ್ಥಾನ ವಿಧಾನಸಭೆ ಆವರಣ ಪ್ರವೇಶಿಸಿದ್ದಾರೆ.

ಪುಷ್ಕರ್ ವಿಧಾನಸಭೆ ಕ್ಷೇತ್ರದ ಶಾಸಕ ಸುರೇಶ್ ಸಿಂಗ್ ರಾವತ್ ದನದೊಂದಿಗೆ ವಿಧಾನಸಭೆ ಬಳಿ ಬಂದಿದ್ದು, ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ, ಸದ್ದು–ಗದ್ದಲಕ್ಕೆ ಬೆದರಿದ ಹಸು ಅಲ್ಲಿಂದ ಓಡಿದೆ. ಶಾಸಕರ ಬೆಂಬಲಿಗರು ಅದನ್ನು ಮತ್ತೆ ಹಿಡಿದು ತರಲು ಯತ್ನಿಸಿದ್ದಾರೆ.

ಜಾನುವಾರುಗಳು ಚರ್ಮದ ದದ್ದು ರೋಗದಿಂದ ಬಳಲುತ್ತಿವೆ. ರಾಜ್ಯ ಸರ್ಕಾರ ಗಾಢ ನಿದ್ದೆಯಲ್ಲಿದೆ ಎಂದು ಸುರೇಶ್ ಸಿಂಗ್ ರಾವತ್ ಆರೋಪಿಸಿದ್ದಾರೆ.

‘ಜಾನುವಾರುಗಳ ಚರ್ಮದಲ್ಲಿ ದದ್ದು ಬರುವ(ಲಂಪಿ ಡಿಸೀಸ್) ರೋಗದ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ದನವನ್ನು ವಿಧಾನಸಭೆ ಆವರಣಕ್ಕೆ ಕರೆತಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ದನ ಓಡಿಹೋಗಿರುವುದನ್ನು ಉಲ್ಲೇಖಿಸಿದ ಅವರು, ‘ಗೋ ಮಾತೆ ಕೂಡ ಈ ಸರ್ಕಾರದ ಮೇಲೆ ಕೋಪಗೊಂಡಿದೆ’ ಎಂದು ಟೀಕಿಸಿದ್ದಾರೆ.

ಜಾನುವಾರುಗಳಿಗೆ ಔಷಧ, ಲಸಿಕೆ ಹಾಕಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ (ಆರ್‌ಎಲ್‌ಪಿ) ಶಾಸಕರು ಕೂಡ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದಾರೆ.

ಜಾನುವಾರುಗಳ ಚರ್ಮ ದದ್ದು ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕಲಾಪ ಆರಂಭವಾಗುವುದಕ್ಕೂ ಮೊದಲು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.