ADVERTISEMENT

ಪಂಚರಾಜ್ಯಗಳ ಚುನಾವಣಾ ಕಣದಲ್ಲಿ...

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 15:30 IST
Last Updated 24 ನವೆಂಬರ್ 2023, 15:30 IST
   

ವಿಡಿಯೊ ಹಂಚಿಕೆ: ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ಕೋರುತ್ತಿರುವ ವಿಡಿಯೊವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಧಿಕಾರಕ್ಕಾಗಿ ಪೈಲಟ್‌– ಗೆಹಲೋತ್ ನಡುವೆ ತಿಕ್ಕಾಟವಿದೆ ಎಂಬ ಅಂಶ ಪ್ರಚಾರ ಸಂದರ್ಭದಲ್ಲಿ ಪದೇ ಪದೇ ಕೇಳಿ ಬಂದ ಹಿನ್ನೆಲೆಯಲ್ಲಿ ಗೆಹಲೋತ್‌ ಅವರ ನಡೆ ಮಹತ್ವ ಪಡೆದಿದೆ. ರಾಜಸ್ಥಾನದಲ್ಲಿ ಶನಿವಾರ ಮತದಾನ ನಡೆಯಲಿದೆ. 

ಗೆಹಲೋತ್‌ ಮನವಿ: ‘ಇಬ್ಬರು ಗುಜರಾತಿಗಳು (ಮೋದಿ, ಶಾ) ರಾಜಸ್ಥಾನದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಾನು ರಾಜಸ್ಥಾನಿ. ಗುಜರಾತಿನಲ್ಲಿ ಜನರು ಅವರನ್ನು ಗೆಲ್ಲುವಂತೆ ಮಾಡಿದ ರೀತಿಯಲ್ಲೇ ರಾಜ್ಯದ ಜನರು ನನ್ನನ್ನು ಗೆಲ್ಲಿಸಬೇಕು’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಕೋರಿದ್ದಾರೆ.

ADVERTISEMENT

ಕೆಸಿಆರ್‌ ಆರೋಪ: ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಬಿಆರ್‌ಎಸ್‌ ಸೇರುವುದಾಗಿ ಹೇಳಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಮತ ಕೋರುತ್ತಿದ್ದಾರೆ ಎಂದು ಬಿಆರ್‌ಎಸ್‌ ಅಧ್ಯಕ್ಷ, ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್‌ ಶುಕ್ರವಾರ  ಆರೋಪಿಸಿದ್ದಾರೆ.

ಕಲ್ಲಿದ್ದಲು ಗಣಿ ಪ್ರದೇಶ ಹೆಚ್ಚಿರುವ ಮಂಚೆರಿಯಲ್‌ನಲ್ಲಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕಲ್ಲಿದ್ದನ್ನು ಆಸ್ಟ್ರೇಲಿಯಾದ ಅದಾನಿ ಸಮೂಹದ ಕಲ್ಲಿದ್ದಲು ಗಣಿಯಿಂದ ಆಮದು ಮಾಡಿಕೊಳ್ಳುತ್ತಿರುವುದಾಗಿ ಪ್ರಧಾನಿ ಮೋದಿ ಅವರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಅಮಿತ್‌ಶಾ ಆಶ್ವಾಸನೆ: ಸಾವಿರಾರು ಕೋಟಿ ಮೌಲ್ಯದ ಹಗರಣದಲ್ಲಿ ಕೆ. ಚಂದ್ರಶೇಖರರಾವ್‌ ಭಾಗಿಯಾಗಿದ್ದಾರೆ. ತಮಗೆ ಏನೂ ಆಗುವುದಿಲ್ಲ ಎಂದು ಕೆಸಿಆರ್‌ ಭಾವಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಹಗರಣಗಳ ಬಗ್ಗೆ ಬಿಜೆಪಿ ಸರ್ಕಾರ ತನಿಖೆ ನಡೆಸಲಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಲಿದೆ ಎಂದು  ಚುನಾವಣಾ ರ್‍ಯಾಲಿಯಲ್ಲಿ ಹೇಳಿದರು.

‘ಮುಕ್ತಾಯದ ಹಂತ’: ತೆಲಂಗಾಣದಲ್ಲಿ ಬಿಆರ್‌ಎಸ್‌ ಸರ್ಕಾರವು ಜನರನ್ನು ವಂಚಿಸಿದ್ದು, ಅದರ ಅವಧಿ ಮುಕ್ತಾಯದ ಹಂತ ತಲುಪಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಪಾಲಕುರ್ತಿಯಲ್ಲಿ  ಮಾತನಾಡಿದ ಅವರು, ರಾಜ್ಯದ ಯುವಜನತೆ, ಮಹಿಳೆಯರು ಮತ್ತು ರೈತರಿಗೆ ಅನ್ಯಾಯ ಆಗಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.