ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ತಾನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 8:56 IST
Last Updated 25 ಜನವರಿ 2020, 8:56 IST
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸುವ ವೇಳೆ ವಿಧಾಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸುವ ವೇಳೆ ವಿಧಾಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್.   

ಜೈಪುರ: ವಿವಾದಾತ್ಮದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನ ವಿಧಾನಸಭೆಯಲ್ಲಿ ಶನಿವಾರ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು.

ಈ ಮೂಲಕ ಕೇರಳ ಮತ್ತು ಪಂಜಾಬ್ ರಾಜ್ಯಗಳ ನಂತರ ಶಾಸಕಾಂಗ ಮಾರ್ಗ ಬಳಸಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ ದೇಶದ ಮೂರನೇ ರಾಜ್ಯ ಎನಿಸಿಕೊಂಡಿದೆ. ಹಲವಾರು ಬಿಜೆಪಿ ನಾಯಕರು ಸದನದ ಬಾವಿಗಿಳಿದು ಪೌರತ್ವ ಕಾನೂನು ಪರವಾಗಿ ಘೋಷಣೆಗಳನ್ನು ಕೂಗಿದರು.

ಇತ್ತೀಚೆಗೆ ಸಂಸತ್ತು ಜಾರಿಗೆ ತಂದಿರುವ ಸಿಎಎ 'ಅಕ್ರಮ ವಲಸಿಗರನ್ನು ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸುವ ಗುರಿಯನ್ನು ಹೊಂದಿದೆ'. 'ಧರ್ಮದ ಆಧಾರದ ಮೇಲೆ ಜನರ ಮೇಲಿನ ಇಂತಹ ತಾರತಮ್ಯವು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ವಿಚಾರಗಳಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಇದು 14ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ' ಎಂದು ಅಂಗೀಕಾರ ನಿರ್ಣಯವು ಆರೋಪಿಸಿದೆ.

ADVERTISEMENT

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಧರ್ಮದ ಆಧಾರದ ಮೇಲೆ ತಾರತಮ್ಯ ಎಸಗುವ ಕಾನೂನನ್ನು ಜಾರಿಗೆ ತರಲಾಗಿದೆ. ಈ ಕಾರಣಕ್ಕಾಗಿಯೇ ಕಾನೂನಿನ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ ಮತ್ತು ಪ್ರತಿಭಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಅಲ್ಲದೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಮತ್ತು ಅಸ್ಸಾಂ ಅನ್ನು ಕೂಡ ನಿರ್ಣಯ ಅಂಗೀಕಾರದಲ್ಲಿ ಸೇರಿಸಲಾಗಿದೆ.

ಈ ವಾರದ ಆರಂಭದಲ್ಲಿ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾನೂನಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಕೇಂದ್ರ ಸರ್ಕಾರದ ವಾದವನ್ನು ಆಲಿಸದೆಯೇ ಈ ವಿಚಾರದಲ್ಲಿ ಯಾವುದೇ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಕೋರ್ಟ್, ಈ ಕುರಿತಾಗಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ನಾಲ್ಕು ವಾರಗಳ ಗಡುವನ್ನು ನೀಡಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ, 2014ರ ಡಿಸೆಂಬರ್ 14ಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.