ಹತ್ಯೆ (ಪ್ರಾತಿನಿಧಿಕ ಚಿತ್ರ)
ಬಾರ್ಮರ್: ಪ್ರಿಯಕರನನ್ನು ಹುಡುಕಿಕೊಂಡು 600 ಕಿ.ಮೀ ಪ್ರಯಾಣಿಸಿ ಬಂದಿದ್ದ 37 ವರ್ಷದ ಮಹಿಳೆ ಕೊಲೆಯಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಜುನ್ಜುನುವಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಮುಕೇಶ್ ಕುಮಾರಿ ದಶಕಗಳ ಹಿಂದೆ ಪತಿಯಿಂದ ಬೇರೆಯಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಾರ್ಮರ್‌ನ ನಿವಾಸಿ ಮನರಾಮ್ ಎನ್ನುವ ವ್ಯಕ್ತಿಯೊಂದಿಗೆ ಫೇಸ್ಬುಕ್‌ನಲ್ಲಿ ಸಂಪರ್ಕ ಬೆಳೆಸಿದ್ದರು. ದಿನ ಕಳೆದಂತೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.
ಪ್ರಿಯಕರ ಮನರಾಮ್ ಜತೆಗೆ ಮದುವೆಯಾಗಬೇಕು, ಜೀವನ ನಡೆಸಬೇಕು ಎಂಬ ಆಸೆಯಿಂದ ಮುಕೇಶ್ ಜುನ್ಜುನುನಿಂದ ಬಾರ್ಮರ್‌ಗೆ 600 ಕಿ.ಮೀ ಕಾರಿನಲ್ಲಿ ಬಂದಿದ್ದರು. ಈ ವೇಳೆ ಮನರಾಮ್– ಮುಕೇಶ್ ನಡುವೆ ಮದುವೆ ವಿಚಾರಕ್ಕೆ ಗಲಾಟೆ ನಡೆದಿದೆ. ಸೆ.10 ರಂದು ಮುಕೇಶ್, ಮನರಾಮ್ ಕುಟುಂಬಸ್ಥರನ್ನು ಭೇಟಿಯಾಗಿ ಇಬ್ಬರ ನಡುವಿನ ಸಂಬಂಧದ ಬಗ್ಗೆ ತಿಳಿಸಿದ್ದಾರೆ. ಈ ಗಲಾಟೆಯ ವಿಚಾರ ತಿಳಿದ ಪೊಲೀಸರು ಇಬ್ಬರಿಗೂ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಮನರಾಮ್ ಮತ್ತು ಆತನ ಪತ್ನಿಯ ವಿಚ್ಛೇದನ ಅರ್ಜಿ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಮಾತನಾಡಬೇಕೆಂದು ಮುಕೇಶ್‌ಳನ್ನು ಕರೆದೊಯ್ದ ಮನರಾಮ್ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದಿದ್ದಾನೆ. ಶವವನ್ನು ಕಾರಿನಲ್ಲಿ ಚಾಲಕನ ಸೀಟ್‌ನಲ್ಲಿಟ್ಟು ಅಪಘಾತ ಎಂಬಂತೆ ಬಿಂಬಿಸಲು ಯತ್ನಿಸಿದ್ದಾನೆ. ಮರುದಿನ ಬೆಳಿಗ್ಗೆ ಮುಕೇಶ್ ಮೃತದೇಹ ಸಿಕ್ಕ ಬಗ್ಗೆ ವಕೀಲರ ಮೂಲಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರ ಫೋನ್‌ಗಳ ಲೊಕೇಶನ್ ಒಂದೇ ಸ್ಥಳದಲ್ಲಿ ಪತ್ತೆಯಾಗಿರುವುದನ್ನು ಗಮನಿಸಿದ್ದು, ಮನರಾಮ್‌ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.