ADVERTISEMENT

‘ರಜನಿ ಮಕ್ಕಳ್ ಮಂದಿರಂ‘ ವಿಸರ್ಜನೆ: ರಜನಿಕಾಂತ್‌ ರಾಜಕೀಯ ಪ್ರವೇಶಕ್ಕೆ ಇತಿಶ್ರೀ

ಪಿಟಿಐ
Published 12 ಜುಲೈ 2021, 8:57 IST
Last Updated 12 ಜುಲೈ 2021, 8:57 IST
ರಜನಿಕಾಂತ್
ರಜನಿಕಾಂತ್   

ಚೆನ್ನೈ: ತನ್ನ ರಾಜಕೀಯ ಪ್ರವೇಶಕ್ಕಾಗಿಯೇ ಸ್ಥಾಪಿಸಲಾಗಿದ್ದ ‘ರಜನಿ ಮಕ್ಕಳ್‌ ಮಂದಿರಂ’ (ಆರ್‌ಎಂಎಂ) ವೇದಿಕೆಯನ್ನು ವಿಸರ್ಜಿಸುತ್ತಿರುವುದಾಗಿ ಸೋಮವಾರ ಘೋಷಿಸಿರುವ ಸೂಪರ್‌ಸ್ಟಾರ್ ರಜನಿಕಾಂತ್, ಭವಿಷ್ಯದಲ್ಲಿ ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.

ಭವಿಷ್ಯದಲ್ಲಿ ರಜನಿ ರಾಜಕೀಯ ಪ್ರವೇಶಿಸುತ್ತಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಅವರ ಅಭಿಮಾನಿಗಳು ಮತ್ತು ಆರ್‌ಆರ್‌ಎಂ ವೇದಿಕೆಯ ಪದಾಧಿಕಾರಿಗಳು ಸೋಮವಾರ ಪ್ರಶ್ನೆಗಳನ್ನು ಹುಟ್ಟು ಹಾಕಿದ ಕೆಲವೇ ಗಂಟೆಗಳಲ್ಲಿ, ರಜನಿಕಾಂತ್ ಅವರು, ‘ನಾನು ರಾಜಕೀಯ ಪ್ರವೇಶಿಸುವುದಿಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ಕಾರಣಗಳು, ಸನ್ನಿವೇಶಗಳಿಂದಾಗಿ ಅಂದುಕೊಂಡದ್ದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳಿರುವ ರಜನಿಕಾಂತ್, ಆ ಕಾರಣದಿಂದಲೇ ಈ ಹಿಂದೆ ರಾಜಕೀಯ ಪ್ರವೇಶವನ್ನು ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ.

ADVERTISEMENT

‘ನಾನು ಭವಿಷ್ಯದಲ್ಲಿ ರಾಜಕೀಯ ಸೇರಬೇಕೆಂಬ ಯಾವುದೇ ಉದ್ದೇಶವನ್ನೂ ಹೊಂದಿಲ್ಲ‘ ಎಂದು ರಜನಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಆರ್‌ಎಂ ವೇದಿಕೆಯನ್ನು ವಿಸರ್ಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಜನಿಕಾಂತ್ ಫ್ಯಾನ್ಸ್ ಫೋರಂ (ರಜನಿಕಾಂತ್ ರಸಿಗರ್‌ ನರ್ಪಾನಿ ಮಂದ್ರಂ) ಈ ಮೊದಲಿನಂತೆಯೇ ಕಾರ್ಯನಿರ್ವಹಿಸಲಿದೆ. ಈ ವೇದಿಕೆಯ ಅಡಿಯಲ್ಲಿ ಅಭಿಮಾನಿಗಳು ಕಾರ್ಯಚಟುವಟಿಕೆಗಳನ್ನು ಮುಂದುವರಿಸಲಿದ್ದಾರೆ‘ ಎಂದು ಅವರು ತಿಳಿಸಿದ್ದಾರೆ.

‘ಕಳೆದ ವರ್ಷ ನಾನು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಪ್ರಕಟಿಸಿದ ನಂತರ, ತನ್ನ ರಾಜಕೀಯ ಪ್ರವೇಶಕ್ಕಾಗಿಯೇ ರಚಿಸಲಾಗಿದ್ದ ಆರ್‌ಆರ್‌ಎಂ ವೇದಿಕೆಯ ಕರ್ತವ್ಯ ಮತ್ತು ಗುರಿಗಳು ಏನು ಎಂಬುದರ ಬಗ್ಗೆ ಸ್ಪಷ್ಟಪಡಿಸುವುದು ನನ್ನ ಕರ್ತವ್ಯವಾಗಿತ್ತು. ಆ ಕೆಲಸವನ್ನು ಈಗ ಮಾಡಿದ್ದೇನೆ ಎಂದು ರಜನಿ ಹೇಳಿದ್ದಾರೆ.

ರಾಜಕೀಯೇತರ ಕಲ್ಯಾಣ ಸಂಘಟನೆಯಾಗಿದ್ದ ರಜನಿಕಾಂತ್‌ ಅಭಿಮಾನಿಗಳ ಒಕ್ಕೂಟವನ್ನು 2018ರಲ್ಲಿ ‘ಆರ್‌ಎಂಎಂ‘ ವೇದಿಕೆಯಾಗಿ ಪರಿವರ್ತಿಸಲಾಗಿತ್ತು. ನಂತರ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ವೇದಿಕೆಯ ಪದಾಧಿಕಾರಿಗಳನ್ನು ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.