ADVERTISEMENT

ರಾಜಕೀಯ ಸುನಾಮಿ ರಜನಿಕಾಂತ್ ಆಶಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 15:23 IST
Last Updated 17 ಮಾರ್ಚ್ 2020, 15:23 IST
ರಜನಿಕಾಂತ್
ರಜನಿಕಾಂತ್   

ಚೆನ್ನೈ: ತಮ್ಮ ಮೂರು ಸೂತ್ರಗಳ ಆಧಾರದಲ್ಲಿ ತಮಿಳುನಾಡು ರಾಜಕೀಯದಲ್ಲಿ ಬದಲಾವಣೆಯ ಸುನಾಮಿ ಏಳಲಿದೆ ಎಂದು ನಟ ರಜನಿಕಾಂತ್ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಸೋಮವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಪ್ರವೇಶವನ್ನು ಪ್ರಸ್ತಾಪಿಸಿದರಾದರೂ, ಪಕ್ಷಕ್ಕೆ ಚಾಲನೆ ನೀಡುವ ದಿನಾಂಕವನ್ನು ತಿಳಿಸಲಿಲ್ಲ. ಪವಾಡದಲ್ಲಿ ನಂಬಿಕೆ ಇರಿಸಿಕೊಂಡಿರುವ ಅವರು, ‘ತಮಿಳುನಾಡಿನಲ್ಲಿ ಸದ್ಯದ ರಾಜಕೀಯ ಸ್ಥಿತಿಯನ್ನು ಬದಲಾಯಿಸಿ, ಚುನಾವಣೆಯಲ್ಲಿ ಗೆಲ್ಲಬೇಕಾದರೆ ದೊಡ್ಡ ಅಲೆಯೊಂದು ಏಳುವ ಅಗತ್ಯವಿದೆ’ ಎಂದು ಹೇಳಿದರು.

‘ಕೆಲವು ದಿನಗಳ ಹಿಂದೆ ಒಂದು ಹನಿಯನ್ನು ಎಸೆದಿದ್ದೆ. ಅದು ನಿಧಾನವಾಗಿ ಈಗ ಬಿರುಗಾಳಿಯ ಸ್ವರೂಪ ಪಡೆದಿದೆ. ಅದು ನಿಲ್ಲಲಾರದು. ಏಕೆಂದರೆ ಅದು ಜನರ ಕೈಯಲ್ಲಿದೆ. ಅದು ಅಲೆಯಾಗಿ ಪರಿವರ್ತನೆಯಾಗಬೇಕಾದರೆ ರಜನಿಕಾಂತ್ ಅಭಿಮಾನಿಗಳ ಒಳಗೊಳ್ಳುವಿಕೆ ಅಗತ್ಯ. ಆ ಅಲೆಯು ರಾಜಕೀಯ ಸುನಾಮಿಯಾಗಿ ಬದಲಾಗುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

ADVERTISEMENT

ಕಳೆದ ವಾರ ಮೂರು ಸೂತ್ರಗಳನ್ನು ಅವರು ಹರಿಬಿಟ್ಟಿದ್ದರು. ಭ್ರಷ್ಟಾಚಾರ ಕರಗಿಸಲು ಪಕ್ಷವು ಕಡಿಮೆ ಸಂಖ್ಯೆಯ ಸದಸ್ಯರನ್ನು ಹೊಂದುವುದು, ಯುವಕರು ಹಾಗೂ ಶುದ್ಧಹಸ್ತರನ್ನು ರಾಜಕೀಯಕ್ಕೆ ತರುವುದು, ಅವರನ್ನು ರಾಜಕೀಯ ಮಹತ್ವದ ಹುದ್ದೆಗಳಲ್ಲಿ ಕೂರಿಸುವುದು ಎಂಬ ಚಿಂತನೆಗಳನ್ನು ಪ್ರಕಟಿಸಿದ್ದರು. ‘ನಾನು ಮುಖ್ಯಮಂತ್ರಿ ಅಭ್ಯರ್ಥಿ ಆಗುವುದಿಲ್ಲ’ ಎಂದೂ ಘೋಷಿಸಿದ್ದರು. ಈ ಸಂದೇಶವನ್ನು ರಾಜ್ಯದ ಮೂಲೆ ಮೂಲೆಗೆ ಹರಡುವಂತೆ ಬೆಂಬಲಿಗರನ್ನು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.