ADVERTISEMENT

ರಜನಿಕಾಂತ್‌ ರಾಜಕೀಯ ನಡೆ ಇಂದು ಪ್ರಕಟ?

ಏಜೆನ್ಸೀಸ್
Published 30 ನವೆಂಬರ್ 2020, 6:03 IST
Last Updated 30 ನವೆಂಬರ್ 2020, 6:03 IST
ರಜನಿಕಾಂತ್‌
ರಜನಿಕಾಂತ್‌    

ಚೆನ್ನೈ: ರಾಜಕೀಯ ಪ್ರವೇಶಿಸದಂತೆ ವೈದ್ಯರು ಸಲಹೆ ನೀಡಿರುವ ನಡುವೆಯೇ ಸೋಮವಾರ ಪಕ್ಷದ ಪದಾಧಿಕಾರಿಗಳ ಸಭೆ ಆಯೋಜಿಸಿರುವ ತಮಿಳುನಾಡಿನ ಮೇರು ನಟ ರಜನಿಕಾಂತ್‌, ಅಲ್ಲಿ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.

ಚೆನ್ನೈ ಹೊರ ವಲಯದ ತಮ್ಮ ಸ್ವಂತ ಕಲ್ಯಾಣ ಮಂಟಪ 'ರಾಘವೇಂದ್ರ ಕಲ್ಯಾಣ ಮಂಟಪ'ದಲ್ಲಿ 'ರಜನಿ ಮಕ್ಕಲ್ ಮಂದಿರಂ' ಪಕ್ಷದ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಯಲಿದೆ. ಈಗಾಗಲೇ ಚೆನ್ನೈನ ತಮ್ಮ ನಿವಾಸದಿಂದ ರಜನಿ ಅಲ್ಲಿಗೆ ತೆರಳಿದ್ದಾರೆ. ಬೆಂಬಲಿಗರ ಬೃಹತ್‌ ಪಡೆಯೇ ಅವರನ್ನು ಹಿಂಬಾಲಿಸಿದೆ.

'ರಜನಿ ಮಕ್ಕಳ್‌ ಮಂದಿರಂ'ನ ಪದಾಧಿಕಾರಿಗಳೊಂದಿಗೆ ಸೂಕ್ತ ಸಮಯದಲ್ಲಿ ಸಮಾಲೋಚನೆ ನಡೆಸಿ ನಂತರ ನನ್ನ ರಾಜಕೀಯ ನಿಲುವಿನ ಬಗ್ಗೆ ಜನರಿಗೆ ತಿಳಿಸುತ್ತೇನೆ' ಎಂದು ನಟ ರಜನಿಕಾಂತ್‌ ಅ. 29ರಂದು ಹೇಳಿದ್ದರು. ಅದಾದ ಒಂದು ತಿಂಗಳಲ್ಲೇ ಈ ಸಭೆ ನಿಗದಿಯಾಗಿದೆ. ಅದರಂತೆ ಮಹತ್ವದ ತೀರ್ಮಾನವೊಂದು ರಜನಿ ಅವರಿಂದ ಹೊರಬೀಳುಸ ಸಾಧ್ಯತೆಗಳಿವೆ.

ADVERTISEMENT

'ಸಭೆ ನಡೆಸಿ ತೀರ್ಮಾನ ಪ್ರಕಟಿಸುವುದಾಗಿ ರಜನಿ ಕಳೆದ ತಿಂಗಳು ಹೇಳಿದ್ದರು. ಅದೇ ಹಿನ್ನೆಲೆಯಲ್ಲೇ ಸಭೆ ನಡೆಯುತ್ತಿದೆ. ಹಿಂದೆ ಹೇಳಿದ ವಿಚಾರಕ್ಕೆ ಸಂಬಂಧಿಸಿದ ತೀರ್ಮಾನವನ್ನು ಈ ಸಭೆಯಿಂದ ನಿರೀಕ್ಷಿಸಬಹುದು,' ಎಂದು ಪಕ್ಷದ ಮೂಲಗಳು ತಿಳಿಸಿವೆ.

2021 ರ ಏಪ್ರಿಲ್-ಮೇನಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ತಿಂಗಳ ಹಿಂದೆ ರಜನಿ ಏನು ಹೇಳಿದ್ದರು?

'ನನ್ನ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದು ನನ್ನದಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ನನ್ನ ಆರೋಗ್ಯದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ವಿವರಗಳು ನಿಜ. ನನ್ನ ರಾಜಕೀಯ ನಿಲುವಿನ ಬಗ್ಗೆ ಸೂಕ್ತ ಸಂದರ್ಭದಲ್ಲಿ 'ರಜನಿ ಮಕ್ಕಳ್‌ ಮಂದಿರಂ'ನ ಪ್ರಮುಖರನ್ನು ಸೂಕ್ತ ಸಮಯದಲ್ಲಿ ಸಂಪರ್ಕಿಸಿ ನಿರ್ಧಾರ ಪ್ರಕಟಿಸುತ್ತೇನೆ,' ಎಂದು ಹೇಳಿದ್ದಾರೆ.

'ರಾಜಕೀಯಕ್ಕೆ ಬರುವ ದಿನಾಂಕ ಘೋಷಣೆ ಮಾಡಲು ಆಗದೇ ಇರುವುದಕ್ಕೆ ತಮ್ಮ ಆರೋಗ್ಯದ ಸಮಸ್ಯೆ ಕಾರಣ,' ಎಂದು ರಜನಿಕಾಂತ್‌ ಅವರು ತಮ್ಮ ಆಪ್ತರು ಮತ್ತು ಸ್ನೇಹಿತರಿಗೆ ಬರೆದಿದ್ದರು ಎನ್ನಲಾದ ಪತ್ರವೊಂದು ಸಾಮಾಜಿಕ ತಾಣಗಳಲ್ಲಿ ಬುಧವಾರ ಕಾಳ್ಗಿಚ್ಚಿನಂತೆ ಹರಡಿತ್ತು. 'ರಜನಿಕಾಂತ್‌ ಅವರಿಗೆ ಕೋವಿಡ್‌ನಿಂದ ಅಪಾಯ ಸಂಭವಿಸಬಹುದಾದ ಸಾಧ್ಯತೆಗಳಿರುವುದರಿಂದ ವೈದ್ಯರ ಸಲಹೆ ಮೇರೆಗೆ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ,' ಎಂದು ಪತ್ರದಲ್ಲಿ ಹೇಳಲಾಗಿತ್ತು. ಇದೇ ಹಿನ್ನೆಲೆಯಲ್ಲಿ ರಜನಿಕಾಂತ್‌ ಇಂದು ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.