ADVERTISEMENT

ರಜನಿ ರಾಜಕೀಯ ಪ್ರವೇಶ ಅನಿಶ್ಚಿತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 19:35 IST
Last Updated 29 ಅಕ್ಟೋಬರ್ 2020, 19:35 IST
ರಜನಿಕಾಂತ್
ರಜನಿಕಾಂತ್   

ಚೆನ್ನೈ: ರಜನಿಕಾಂತ್ ಅವರು 2021ರಲ್ಲಿ ರಾಜಕೀಯ ಪ್ರವೇಶಿಸುವ ಬಗೆಗಿನ ನಿರೀಕ್ಷೆಯು, ನಿರೀಕ್ಷೆಯಾಗಿಯೇ ಉಳಿಯುವ ಸಾಧ್ಯತೆ ಇದೆ. 2021ರಲ್ಲಿ ರಾಜಕೀಯ ಪ್ರವೇಶಿಸುವುದಾಗಿ ಅವರು ಮೂರು ವರ್ಷಗಳ ಹಿಂದೆಯೇ ಘೋಷಿಸಿದ್ದರು. ಆದರೆ, ‘ಆಪ್ತರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಗುರುವಾರ ಟ್ವೀಟ್ ಮಾಡಿದ್ದಾರೆ.

ರಜನಿಕಾಂತ್ ಅವರ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪತ್ರವೊಂದು ವೈರಲ್ ಆಗಿದೆ. ರಜನಿಕಾಂತ್ ಅವರೇ ಈ ಪತ್ರ ಬರೆದಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿತ್ತು. ಈ ಬಗ್ಗೆ ವಿವರಣೆ ನೀಡಲು ಮಾಡಿದ ಟ್ವೀಟ್‌ನಲ್ಲಿ ರಜನಿ ಅವರು ಈ ಮಾತು ಹೇಳಿದ್ದಾರೆ.

‘ನಾನು ಬರೆದಿದ್ದೇನೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ನನ್ನ ಪತ್ರವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಅದರಲ್ಲಿ ನನ್ನ ಆರೋಗ್ಯದ ಬಗ್ಗೆ ಉಲ್ಲೇಖ ಮಾಡಿರುವ ವಿವರಗಳು ನಿಜ. ರಜನಿ ಮಕ್ಕಳ್ ಮಂದರಂನ ಪದಾಧಿಕಾರಿಗಳ ಜತೆ ಚರ್ಚಿಸಿ, ಸರಿಯಾದ ಸಮಯದಲ್ಲಿ ನನ್ನ ರಾಜಕೀಯ ನಿಲುವನ್ನು ಘೋಷಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಮಿಳುನಾಡು ವಿಧಾನಸಭಾ ಚುನಾವಣೆ ಮುಂದಿನ ಏಳು ತಿಂಗಳಲ್ಲಿ ನಡೆಯಬೇಕಿದೆ. ರಜನಿಅವರ ರಾಜಕೀಯ ಪ್ರವೇಶದ ಬಗ್ಗೆ ಇದ್ದ ಸಂದೇಹಗಳನ್ನು ಅವರ ಟ್ವೀಟ್ ಹೇಳಿಕೆಯು ಮತ್ತಷ್ಟು ಹೆಚ್ಚಿಸಿದೆ. ಅವರು ಯಾವಾಗ ರಾಜಕೀಯ ಪ್ರವೇಶಿಸುತ್ತೇನೆ ಎಂಬುದನ್ನು ಹೇಳಿಲ್ಲ. ರಾಜಕೀಯ ಪ್ರವೇಶಿಸುವುದಿಲ್ಲ ಎಂದೂ ಹೇಳಿಲ್ಲ.

ಪತ್ರದಲ್ಲೇನಿದೆ: ತಮಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ, ರಾಜಕೀಯ ಪ್ರವೇಶಿಸಲು ತಾವೇ ನಿಗದಿ ಮಾಡಿದ್ದ ಗಡುವನ್ನು ಪಾಲಿಸಲು ಆಗುತ್ತಿಲ್ಲ ಎಂದು ಆಪ್ತರಿಗೆ ರಜನಿಕಾಂತ್‌ ಬರೆದಿದ್ದಾರೆ ಎನ್ನಲಾದ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೋವಿಡ್‌ನಿಂದ ಅಪಾಯ ಸಂಭವಿಸಬಹುದಾದ ಸಾಧ್ಯತೆ ಇರುವುದರಿಂದ, ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂಬ ವಿವರವೂ ಪತ್ರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.