ನವದೆಹಲಿ: ದೇಶದ ಸೇನಾಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಉತ್ಪಾದಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಯಡಿ, ಆಮದು ನಿಷೇಧಕ್ಕೆ ಒಳಪಟ್ಟಿರುವ ‘101 ಮಿಲಿಟರಿ ವ್ಯವಸ್ಥೆಗಳ’ ಮೂರನೇ ಪಟ್ಟಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಬಿಡುಗಡೆ ಮಾಡಿದ್ದಾರೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಶಸ್ತ್ರಾಸ್ತ್ರಗಳ ಆಮದನ್ನು ನಿಲ್ಲಿಸವುದು ಹಾಗೂ ಅವುಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಕೇಂದ್ರ ಸರ್ಕಾರದ ಈ ನಡೆಯಿಂದ ಶಸ್ತ್ರಾಸ್ತ್ರಗಳ ಉತ್ಪಾದನೆ ಕ್ಷೇತ್ರದಲ್ಲಿರುವ ದೇಶೀಯ ಉದ್ದಿಮೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ.
ಡಿಆರ್‌ಡಿಒ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವ ರಾಜನಾಥ್ ಸಿಂಗ್, ‘ಸೆನ್ಸರ್‌ಗಳು, ವಿವಿಧ ಆಯುಧಗಳು, ಮದ್ದುಗುಂಡುಗಳು, ನೌಕಾಪಡೆ ಬಳಸುವ ಹೆಲಿಕಾಪ್ಟರ್‌ಗಳು, ಗಸ್ತು ಹಡಗುಗಳು, ಯುದ್ಧನೌಕೆ ನಿರೋಧಕ ಕ್ಷಿಪಣಿಗಳು ಹಾಗೂ ವಿಕಿರಣ ನಿರೋಧಕ ಕ್ಷಿಪಣಿಗಳನ್ನು ಈ ಪಟ್ಟಿ ಒಳಗೊಂಡಿದೆ’ ಎಂದು ಹೇಳಿದರು.
‘ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದು ಹಾಗೂ ಮಿಲಿಟರಿ ಸಾಧನಗಳ ರಫ್ತಿಗೆ ಉತ್ತೇಜನ ನೀಡಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ. ಈ ಗುರಿ ಸಾಧನೆಯ ಪ್ರಯತ್ನದಲ್ಲಿ ಸಾರ್ವಜನಿಕರು ಹಾಗೂ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಇಂದು ಬಿಡುಗಡೆಯಾಗಿರುವ ಪಟ್ಟಿ ಪ್ರೋತ್ಸಾಹ ನೀಡಲಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.