ADVERTISEMENT

ಪಾಕ್‌ ವಿರುದ್ಧ ಎಚ್ಚರಿಕೆ ಅಗತ್ಯ: ಸಚಿವ ರಾಜನಾಥ್‌ ಸಿಂಗ್‌

ಐಎಂಎ: ಕೆಡೆಟ್‌ಗಳ ನಿರ್ಗಮನ ಪಥಸಂಚಲನ ಸಮಾರಂಭ

ಪಿಟಿಐ
Published 7 ಡಿಸೆಂಬರ್ 2019, 18:30 IST
Last Updated 7 ಡಿಸೆಂಬರ್ 2019, 18:30 IST
ಡೆಹ್ರಾಡೂನ್‌ ಐಎಂಎದಲ್ಲಿ ಶನಿವಾರ ನಡೆದ ಕೆಡೆಟ್‌ಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗೌರವ ವಂದನೆ ಸ್ವೀಕರಿಸಿದರು     –ಪಿಟಿಐ ಚಿತ್ರ
ಡೆಹ್ರಾಡೂನ್‌ ಐಎಂಎದಲ್ಲಿ ಶನಿವಾರ ನಡೆದ ಕೆಡೆಟ್‌ಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗೌರವ ವಂದನೆ ಸ್ವೀಕರಿಸಿದರು     –ಪಿಟಿಐ ಚಿತ್ರ   

ಡೆಹ್ರಾಡೂನ್‌: ‘ಭಾರತಕ್ಕೆ ನೆರೆರಾಷ್ಟ್ರದ ಭೂ ಪ್ರದೇಶ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆಯಿಲ್ಲ. ಆದರೆ ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯಂತೆ ಅನುಸರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸಶಸ್ತ್ರ ಪಡೆಗಳು ಎಚ್ಚರದಿಂದ ಇರಬೇಕು’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದರು.

ಇಲ್ಲಿನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಸೇನೆಗೆ ನಿಯೋಜನೆಗೊಂಡ ತರಬೇತಿ ಪಡೆದ ಕೆಡೆಟ್‌ಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಮಾತನಾಡಿದ ಅವರು, ಸೇವೆ ಮತ್ತು ಶಾಂತಿಯ ಸಂದೇಶವನ್ನು ಜಗತ್ತಿಗೆ ಪಸರಿಸಬೇಕು. ಆದರೆ, ಪಾಕಿಸ್ತಾನದಂತಹ ನೆರೆರಾಷ್ಟ್ರದೊಂದಿಗೆ ವ್ಯವಹರಿಸುವಾಗ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

‘ಹಲವು ಯುದ್ಧಗಳಲ್ಲಿ ಭಾರತದ ಎದುರು ಸೋಲು ಅನುಭವಿಸಿದ್ದರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ. ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ವಿಷಯವನ್ನಾಗಿಯೇ ಮುಂದುವರಿಸಿದೆ. ಅಲ್ಲಿ ಉಗ್ರರು ಪ್ರಬಲರಾಗಿದ್ದು, ಸರ್ಕಾರ ಅವರ ಕೈಗೊಂಬೆಯಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಭಾರತ ಮತ್ತು ಚೀನಾದ ಪ್ರಾದೇಶಿಕ ಗ್ರಹಿಕೆಗಳು ಭಿನ್ನವಾಗಿರಬಹುದು. ಆದರೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅದೂ ಕೈಜೋಡಿಸಿದೆ ಎಂದ ಸಿಂಗ್‌, ದೋಕಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಪಡೆಗಳು ಹೆಚ್ಚಿನ ಇಚ್ಛಾಶಕ್ತಿ ಮತ್ತು ಸಂಯಮ ಪ್ರದರ್ಶಿಸಿದವು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

‘ಅಕಾಡೆಮಿಯಲ್ಲಿ ಕಲಿತ ಕೌಶಲಗಳನ್ನು ಅಳವಡಿಸಿಕೊಂಡು ಸೈಬರ್‌ ಭಯೋತ್ಪಾದನೆಯ ಹೊಸ ಸವಾಲು ಎದುರಿಸಲು ಸಿದ್ಧರಾಗಬೇಕು. ತರಬೇತಿಯು ಕೇವಲ ನಿಮಗೆ ಬಲ ನೀಡಿಲ್ಲ, ಜೊತೆಗೆ ಜೀವನಕ್ಕೆ ಹೊಸ ಅರ್ಥವನ್ನೂ ಕಲ್ಪಿಸಿದೆ’ ಎಂದು ಹೇಳಿದ ಅವರು, ಭದ್ರತಾ ಪಡೆಗಳಿಗೆ ನಿಯೋಜನೆಗೊಂಡ ಕೆಡೆಟ್‌ಗಳನ್ನು ಅಭಿನಂದಿಸಿದರು.

ಒಟ್ಟು 377 ಕೆಡೆಟ್‌ಗಳು ಭದ್ರತಾ ಪಡೆಗಳಿಗೆ ನಿಯೋಜನೆಗೊಂಡಿದ್ದು, ಈ ಪೈಕಿ ಭಾರತದೊಂದಿಗೆ ಸ್ನೇಹ ಹೊಂದಿರುವ 71 ಕೆಡೆಟ್‌ಗಳು ಆಯಾ ರಾಷ್ಟ್ರಗಳ ಪಡೆಗಳಿಗೆ ನಿಯೋಜನೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.