ADVERTISEMENT

‘ಕಾಂಗ್ರೆಸ್ ಎಂದರೆ ಮುಸ್ಲಿಮರು’ ಎಂಬ ರೆಡ್ಡಿ ಹೇಳಿಕೆ: ರಾಜನಾಥ್ ವಿರೋಧ

ಪಿಟಿಐ
Published 9 ನವೆಂಬರ್ 2025, 14:44 IST
Last Updated 9 ನವೆಂಬರ್ 2025, 14:44 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್   

ಔರಂಗಾಬಾದ್ : ‘ಕಾಂಗ್ರೆಸ್ ಎಂದರೆ ಮುಸ್ಲಿಮರು’ ಎಂದಿದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಟೀಕಿಸಿದ್ದು, ಇದು ರಾಜಕೀಯ ಅಧಃಪತನದ ಧೋರಣೆಯ ಮಾತಾಗಿದೆ ಎಂದು ಹೇಳಿದ್ದಾರೆ. 

ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಬಿಜೆಪಿ ನೇತೃತ್ವದ ಎನ್‌ಡಿಎ ಧರ್ಮ, ಜಾತಿ ಮತ್ತು ಪಂಥಗಳ ಹೆಸರಿನಲ್ಲಿ ಜನರನ್ನು ಒಡೆಯುವುದಿಲ್ಲ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಮತ್ತು ಆರ್‌ಜೆಡಿ ಧರ್ಮ, ಜಾತಿ ಮತ್ತು ಪಥಗಳ ಆಧಾರದಲ್ಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ. ಈ ಚುನಾವಣೆಯು ಉತ್ತಮ ಆಡಳಿತ ಮತ್ತು ಜಂಗಲ್ ರಾಜ್‌ ನಡುವಿನ ಹೋರಾಟವಾಗಿದೆ. ಬಿಹಾರವನ್ನು ಜಾತಿ ಸಂಘರ್ಷಕ್ಕೆ ತಳ್ಳಿದ ಮತ್ತು ಹತ್ಯಾಕಾಂಡ ನಡೆಸಿದ ಅದೇ ಜನರು ಈಗ ಮತ ಕೇಳುತ್ತಿದ್ದಾರೆ. ಅಂತಹ ಶಕ್ತಿಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದಿದ್ದಾರೆ. 

ADVERTISEMENT

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ತೆಲಂಗಾಣ ಸಂಪುಟಕ್ಕೆ ಸೇರಿಸಿದ್ದನ್ನು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರು ವಿರೋಧಿಸಿದ್ದರು. ಇದನ್ನು ಉಲ್ಲೇಖಿಸಿ ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ‘ಕಾಂಗ್ರೆಸ್ ಮಾತ್ರವೆ ಅಲ್ಪಸಂಖ್ಯಾತ ಸಮುದಾಯಕ್ಕೆ ದೊಡ್ಡ ಹುದ್ದೆಗಳನ್ನು ನೀಡುತ್ತದೆ. ಕಾಂಗ್ರೆಸ್ ಎಂದರೆ ಮುಸ್ಲಿಮರು ಮತ್ತು ಮುಸ್ಲಿಮರು ಎಂದರೆ ಕಾಂಗ್ರೆಸ್’ ಎಂದು ಹೇಳಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.