ADVERTISEMENT

ಯೋಧನ ತಂದೆಗೆ ಥಳಿತ ಪ್ರಕರಣ: ಸಿಎಂ ನಿತೀಶ್ ಜೊತೆ ಮಾತನಾಡಿದ ರಾಜನಾಥ್ ಸಿಂಗ್

ಪಿಟಿಐ
Published 1 ಮಾರ್ಚ್ 2023, 13:37 IST
Last Updated 1 ಮಾರ್ಚ್ 2023, 13:37 IST
   

ನವದೆಹಲಿ: 2020ರ ಗಾಲ್ವಾನ್‌ ಕಣಿವೆ ಘರ್ಷಣೆಯಲ್ಲಿ ಚೀನಾ ಸೇನೆಯ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಯೋಧನ ಸ್ಮಾರಕ ನಿರ್ಮಾಣ ಮಾಡಿದ್ದ ತಂದೆಯನ್ನು ಬಿಹಾರ ಪೊಲೀಸರು ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜತೆ ಬುಧವಾರ ಮಾತುಕತೆ ನಡೆಸಿದ್ದಾರೆ.

ಹುತಾತ್ಮ ಯೋಧ ಜೈ ಕಿಶೋರ್‌ ಸಿಂಗ್‌ ಅವರ ತಂದೆ ಇಲ್ಲಿನ ವೈಶಾಲಿಯಲ್ಲಿನ ಸರ್ಕಾರಿ ಭೂಮಿಯಲ್ಲಿ ತಮ್ಮ ಮಗನ ಸ್ಮಾರಕ ನಿರ್ಮಿಸಿದ್ದರು. ಭೂ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ರಾಜ್ ಕಪೂರ್ ಸಿಂಗ್ ಅವರನ್ನು ಶನಿವಾರ ಥಳಿಸಿ, ಬಂಧಿಸಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು.

ಘಟನೆ ಕುರಿತ ವರದಿಗಳ ನಂತರ ರಕ್ಷಣಾ ಸಚಿವರು ಬಿಹಾರ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈ ವೇಳೆ ನಿತೀಶ್‌ ಕುಮಾರ್ ಸಿಂಗ್‌ಗೆ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾಜ್ ಕಪೂರ್ ಸಿಂಗ್ ಬಂಧನ ವಿರೋಧಿಸಿ ಸ್ಥಳೀಯರು ಬಿಹಾರದ ವೈಶಾಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬಿಹಾರದ ಪ್ರತಿಪಕ್ಷ ಬಿಜೆಪಿ ಸದಸ್ಯರು ಬುಧವಾರ ರಾಜ್ಯ ವಿಧಾನಸಭೆಯೊಳಗೆ ಈ ವಿಚಾರ ಪ್ರಸ್ತಾಪಿಸಿ ಪ್ರತಿಭಟಿಸಿದರು. ಯೋಧನ ತಂದೆಯ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ವಿರೋಧಿಸಿ ಸದನದಿಂದ ಹೊರನಡೆದರು.

ಕುಟುಂಬದಿಂದ ಅಕ್ರಮ ಸ್ಮಾರಕ ನಿರ್ಮಾಣವನ್ನು ವಿರೋಧಿಸಿದ ಗ್ರಾಮಸ್ಥರೊಂದಿಗೆ ಮಾತಿನ ಚಕಮಕಿ ನಡೆಸಿದ ಕಾರಣಕ್ಕಾಗಿ ರಾಜ್ ಕಪೂರ್ ಅವರನ್ನು ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.