ADVERTISEMENT

ರಾಜ್ಯಸಭೆ | ಕಲಾಪ ನುಂಗಿದ ಗದ್ದಲ; ಅವಿಶ್ವಾಸ ನೋಟಿಸ್‌ಗೆ ದೇವೇಗೌಡ ಕಿಡಿ

ಜಗದೀಪ್‌ ಧನಕರ್ ವಿರುದ್ಧ ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ವಿಚಾರವಾಗಿ ಗದ್ದಲ

ಪಿಟಿಐ
Published 13 ಡಿಸೆಂಬರ್ 2024, 3:19 IST
Last Updated 13 ಡಿಸೆಂಬರ್ 2024, 3:19 IST
<div class="paragraphs"><p>ರಾಜ್ಯಸಭೆಯಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು&nbsp; </p></div>

ರಾಜ್ಯಸಭೆಯಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು 

   

–ಪಿಟಿಐ ಚಿತ್ರ 

ನವದೆಹಲಿ: ಸಭಾಪತಿ ಜಗದೀಪ್‌ ಧನಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ, ಶತಕೋಟ್ಯಧಿಪತಿ ಹೂಡಿಕೆದಾರ ಜಾರ್ಜ್‌ ಸೋರೊಸ್‌ ಜತೆ ಕಾಂಗ್ರೆಸ್‌ ನಾಯಕರ ನಂಟು ಕುರಿತ ಬಿಜೆ‍ಪಿಯ ಆರೋಪಗಳಿಂದಾಗಿ, ರಾಜ್ಯಸಭೆಯಲ್ಲಿ ಗುರುವಾರ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತಲ್ಲದೇ, ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ADVERTISEMENT

ಇದಕ್ಕೂ ಮುನ್ನ, ಎರಡು ಬಾರಿ ಕಲಾಪ ಮುಂದೂಡುವುದಕ್ಕೂ ಸದನ ಸಾಕ್ಷಿಯಾಯಿತು.

ಭೋಜನ ವಿರಾಮದ ಪೂರ್ವದಲ್ಲಿ, ಶೂನ್ಯವೇಳೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ತಾವು ನೀಡಿದ ನೋಟಿಸ್‌ಗಳಲ್ಲಿನ ವಿಷಯಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಕೋರಿದರು.

ಈ ಸಂಬಂಧ ಸಲ್ಲಿಕೆಯಾಗಿದ್ದ 6 ನೋಟಿಸ್‌ಗಳನ್ನು ಸಭಾಪತಿ ಧನಕರ್‌ ತಿರಸ್ಕರಿಸಿದರು. ಆಗ, ಧನಕರ್‌ ಅವರ ನಡೆಗೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಧ್ಯಪ್ರವೇಶಿಸಿದ ಸಚಿವ ಜೆ.ಪಿ.ನಡ್ಡಾ, ‘ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸುದ್ದಿಗೋಷ್ಠಿ ನಡೆಸಿ, ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಅವರನ್ನು ಟೀಕಿಸಿದ್ದು ಸರಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಸಭಾಪತಿ ಅವರ ರೂಲಿಂಗ್‌ ಅನ್ನು ಪ್ರಶ್ನೆ ಮಾಡುವಂತಿಲ್ಲ ಅಥವಾ ಟೀಕಿಸುವಂತಿಲ್ಲ. ಹಾಗೆ ಮಾಡಿದಲ್ಲಿ ಅದು ಸದನ ಮತ್ತು ಸಭಾಪತಿಗಳ ನಿರ್ಣಯದ ನಿಂದನೆ ಆಗಲಿದೆ’ ಎಂದು ನಡ್ಡಾ ಹೇಳಿದರು.

ನಂತರ, ‘ಸೋನಿಯಾ ಗಾಂಧಿ ಮತ್ತು ಜಾರ್ಜ್‌ ಸೋರೊಸ್‌ ನಡುವಿನ ಸಂಬಂಧವೇನು? ಈ ಬಗ್ಗೆ ತಿಳಿಯಲು ಇಡೀ ದೇಶವೇ ಬಯಸುತ್ತಿದೆ’ ಎಂದು ನಡ್ಡಾ ಹೇಳಿದಾಗ ಅದಕ್ಕೆ ವಿಪಕ್ಷಗಳ ಪಾಳಯದಿಂದ ವಿರೋಧ ವ್ಯಕ್ತವಾಯಿತು. ಗದ್ದಲ ಶುರುವಾದಾಗ ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಲಾಯಿತು.

ಮಧ್ಯಾಹ್ನ ಮತ್ತೆ ಕಲಾಪ ಆರಂಭಗೊಂಡಾಗ, ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್‌ ಅವರು ಕ್ರಿಯಾಲೋಪ ಪ್ರಸ್ತಾವಕ್ಕೆ ಮುಂದಾದರು. ಇದಕ್ಕೆ ಅವಕಾಶ ಇಲ್ಲ ಎಂದು ಧನಕರ್‌ ಹೇಳಿದಾಗ, ವಿಪಕ್ಷಗಳ ಸದಸ್ಯರು ಮತ್ತೆ ಘೋಷಣೆಗಳನ್ನು ಕೂಗಿದಾಗ ಸದನ ಗದ್ದಲದಿಂದ ತುಂಬಿತು.

ಇದರ ನಡುವೆಯೇ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ಸಂಸದ ಎಚ್‌.ಡಿ.ದೇವೇಗೌಡ ಮಾತನಾಡುವಂತೆ ಧನಕರ್‌ ಹೇಳಿದರಾದರೂ, ವಿರೋಧ ಪಕ್ಷಗಳ ಸದಸ್ಯರ ಗದ್ದಲ ಜೋರಾದ ಕಾರಣ, ದೇವೇಗೌಡರು ಮಾತನಾಡಲು ಸಾಧ್ಯವಾಗಲಿಲ್ಲ.

‘ಕಲಾಪ ಸರಿಯಾಗಿ ನಡೆಯುತ್ತಿಲ್ಲ. ಆಡಳಿತ ಪಕ್ಷದವರು ವಿವೇಕರಹಿತರಂತೆ ಆರೋಪಗಳನ್ನು ಮಾಡುತ್ತಿದ್ದಾರೆ. ನೀವು ಅವುಗಳನ್ನು ಆಲಿಸುವ ಜೊತೆಗೆ, ಅವರನ್ನು ಪ್ರೋತ್ಸಾಹಿಸುತ್ತಿದ್ದೀರಿ‘ ಎಂದು ಖರ್ಗೆ ಹೇಳಿದರು.

ಮತ್ತೆ ಗದ್ದಲ ಜೋರಾದ ಕಾರಣ, ಧನಕರ್‌ ಅವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ರಾಜ್ಯಸಭೆಯಲ್ಲಿ ಗುರುವಾರ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮಾತನಾಡಿದರು  –ಪಿಟಿಐ ಚಿತ್ರ 

ಅವಿಶ್ವಾಸ ನೋಟಿಸ್‌ಗೆ ದೇವೇಗೌಡ ಕಿಡಿ

ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ವಿರುದ್ಧ ಇಂಡಿಯಾ ಮೈತ್ರಿಕೂಟದ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಲು ನೀಡಿರುವ ನೋಟಿಸ್ ವಿರುದ್ಧ ಹರಿಹಾಯ್ದ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ‘ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ದೂಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ವಿಪಕ್ಷಗಳು ಸಂಸತ್ತಿನ ಘನತೆಯನ್ನು ಎತ್ತಿಹಿಡಿಯಬೇಕು ಮತ್ತು ಕಲಾಪಕ್ಕೆ ಅಡ್ಡಿಪಡಿಸುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು. ರಾಜ್ಯಸಭೆಯ ಸಭಾಪತಿ ವಿರುದ್ಧ ಇಂತಹ ನಿರ್ಣಯವನ್ನು ಮಂಡಿಸಲು ಹೊರಟಿರುವುದು ಇತಿಹಾಸದಲ್ಲಿ ಇದೇ ಮೊದಲು. ಇದು ಒಳ್ಳೆಯ ಸಂಪ್ರದಾಯ ಅಲ್ಲ. ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.