ADVERTISEMENT

ರಾಜ್ಯಸಭೆ ಉಪಚುನಾವಣೆ: ಪ್ರಕಾಶಕ, ಮುದ್ರಕ ಡಾ.ಕೆ.ನಾರಾಯಣಗೆ ಬಿಜೆಪಿ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 10:42 IST
Last Updated 17 ನವೆಂಬರ್ 2020, 10:42 IST
ಡಾ.ಕೆ. ನಾರಾಯಣ
ಡಾ.ಕೆ. ನಾರಾಯಣ   

ನವದೆಹಲಿ: ಅಶೋಕ್‌ ಗಸ್ತಿ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭೆಯ ಒಂದು ಸ್ಥಾನಕ್ಕೆ ಡಿ.1 ರಂದು ಉಪ ಚುನಾವಣೆ ನಡೆಯಲಿದ್ದು, ಡಾ.ಕೆ. ನಾರಾಯಣ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ.

ಬೆಂಗಳೂರಿನಲ್ಲಿರುವ ಡಾ.ಕೆ.ನಾರಾಯಣ ಅವರು ಮುದ್ರಕಣ ಉದ್ಯಮ ನಡೆಸುತ್ತಿದ್ದಾರೆ.‌ ಸ್ಪ್ಯಾನ್ ಪ್ರಿಂಟ್ ಎಂಬ‌ ಮುದ್ರಣ ಸಂಸ್ಥೆ ಹೊಂದಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ಕರಪತ್ರಗಳನ್ನು ಮುದ್ರಿಸಿ ಕೊಡುತ್ತಿದ್ದರು.‌ ಇವರು ದೇವಾಂಗ ಸಮುದಾಯದಕ್ಕೆ ಸೇರಿದವರು.

ರಾಜ್ಯಸಭೆ ಉಪಚುನಾವಣೆಗೆ ನವೆಂಬರ್‌ 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನ.19 ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ನ.23 ಕೊನೆಯ ದಿನವಾಗಿದೆ.

ADVERTISEMENT

ಮ್ಯಾಗಜಿನ್‌ ಪ್ರಕಾಶನ ಮತ್ತು ಮುದ್ರಣ ಉದ್ಯಮದಲ್ಲಿ ತೊಡಗಿರುವ ನಾರಾಯಣ ಅವರು ಮೂಲತಃ ಮಂಗಳೂರಿನವರು. ಬೆಂಗಳೂರಿನಲ್ಲಿ 1982ರಲ್ಲಿ ಮೊದಲ ಬಾರಿಗೆ ಮಲ್ಟಿ ಕಲರ್‌ ಪ್ರಿಂಟಿಂಗ್‌ ತಂತ್ರಜ್ಞಾನವನ್ನು ಪರಿಚಯಿಸಿದ ಹೆಗ್ಗಳಿಕೆ ಇವರದು. 25 ವರ್ಷಗಳಿಂದ ಸಂಸ್ಕೃತ ಮಾಸ ಪತ್ರಿಕೆ 'ಸಂಭಾಷಣ ಸಂದೇಶ' ಪ್ರಕಟಿಸುತ್ತಿದ್ದಾರೆ.

ಹಿಂದೂ ಸೇವಾ ಪ್ರತಿಷ್ಠಾನದ ಖಜಾಂಚಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮಂಗಳೂರು, ಪುತ್ತೂರು, ಉಪ್ಪಳದಲ್ಲಿ ದೇವಾಂಗ ಸಮಾಜದಲ್ಲಿ ಬಡ ಮಕ್ಕಳಿಗೆ ಪುಸ್ತಕ ವಿತರಣೆ, ಬಡ ಕುಟುಂಬಗಳಿಗೆ ಹಣಕಾಸು ನೆರವು ನೀಡುತ್ತಿದ್ದಾರೆ. ಶಿಕ್ಷಣ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿನ ಹಲವು ಚಟುವಟಿಕೆಗಳಲ್ಲಿ 40 ವರ್ಷಗಳಿಂದ ತೊಡಗಿಸಿಕೊಂಡಿದ್ದು, ಇವರಿಗೆ ಗೌರವ ಡಾಕ್ಟರೇಟ್‌ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.