ADVERTISEMENT

ಧರ್ಮದ ಸಮಸ್ಯೆ: ಸಂತರ ಕಾರ್ಯತಂತ್ರ

ಅಸ್ಸಾಂ ಮಾದರಿಯಲ್ಲಿ ಎಲ್ಲ ರಾಜ್ಯಗಳಲ್ಲೂ ಎನ್‌ಆರ್‌ಸಿ l ಧರ್ಮಾದೇಶ ಸಮಾವೇಶ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 20:15 IST
Last Updated 3 ನವೆಂಬರ್ 2018, 20:15 IST
   

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಆರಂಭವಾದ ಎರಡು ದಿನಗಳ ‘ಧರ್ಮಾದೇಶ’ ಸಮಾವೇಶಕ್ಕೆ ಶನಿವಾರ ಚಾಲನೆ ದೊರೆಯಿತು.

ಅಖಿಲ ಭಾರತೀಯ ಸಂತ ಸಮಿತಿ ಆಯೋಜಿಸಿರುವ ಸಮಾವೇಶದಲ್ಲಿ ದೇಶದ ನಾನಾ ಕಡೆಯಿಂದ ಬಂದ ಸಾವಿರಾರು ಸಾಧು, ಸಂತರು ಮತ್ತು 127 ಹಿಂದೂ ಸಂಘಟನೆಗಳ ಕಾರ್ಯಕರ್ತರುಭಾಗವಹಿಸಿದ್ದಾರೆ.

ಸಮಾವೇಶದ ಮೊದಲ ದಿನ ‘ಧರ್ಮದ ಜ್ವಲಂತ ಸಮಸ್ಯೆಗಳ’ ಬಗ್ಗೆ ಚರ್ಚಿಸಲಾಯಿತು. ಜನಸಂಖ್ಯೆ ನಿಯಂತ್ರಣಕ್ಕೆ ಪ್ರತ್ಯೇಕ ನೀತಿ ರೂಪಿಸುವಂತೆ ಸಾಧು, ಸಂತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ADVERTISEMENT

ಅಕ್ರಮ ವಲಸಿಗರ ಪತ್ತೆ ಮತ್ತು ಗಡಿಪಾರಿಗೆ ಕಠಿಣ ನೀತಿ, ಅಸ್ಸಾಂ ಮಾದರಿಯಲ್ಲಿ ಎಲ್ಲ ರಾಜ್ಯಗಳಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಆರಂಭಿಸುವಂತೆ ಬೇಡಿಕೆ ಇಟ್ಟರು.

ಅಕ್ರಮ ವಲಸಿಗರಿಗೆ ಉದ್ಯೋಗ ಮತ್ತು ಜಾತಿ ಪ್ರಮಾಣಪತ್ರ ನೀಡುವುದನ್ನು ದೇಶದ್ರೋಹದ ಕೆಲಸ ಎಂದು ಪರಿಗಣಿಸಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.

1990ರ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಅಯೋಧ್ಯೆಯಲ್ಲಿ ನಡೆದ ಪೊಲೀಸರ ಗೋಲಿಬಾರ್‌ನಲ್ಲಿ ಮೃತಪಟ್ಟ ಕರಸೇವಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

1992ರ ಜನಾಂದೋಲನ ಮಾದರಿಯಲ್ಲಿಯೇ ರಾಮ ಮಂದಿರ ನಿರ್ಮಾಣಕ್ಕೆ ಮತ್ತೊಂದು ಹೋರಾಟ ರೂಪಿಸಲು ಆರ್‌ಎಸ್‌ಎಸ್‌ ಇತ್ತೀಚೆಗೆ ನಿರ್ಣಯ ಕೈಗೊಂಡ ಬೆನ್ನಲ್ಲೇ ಸಂತ ಸಮಿತಿ ಈ ಸಮಾವೇಶ ಆಯೋಜಿಸಿದ್ದು ಮಹತ್ವ ಪಡೆದುಕೊಂಡಿದೆ.

ಮಸೀದಿ ನಿರ್ಮಾಣಕ್ಕೆ ವಿರೋಧ

ಲಖನೌದಲ್ಲಿ ಮಸೀದಿ ನಿರ್ಮಿಸುವ ರಾಂ ವಿಲಾಸ್‌ ವೇದಾಂತಿ ಅವರ ಪ್ರಸ್ತಾವಕ್ಕೆ ವಿಶ್ವ ಹಿಂದೂ ಪರಿಷತ್‌ ನಾಯಕ ರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಮಂದಿರ ನಿರ್ಮಾಣಕ್ಕೆ ಕಾರ್ಯತಂತ್ರ ರೂಪಿಸಲು ನಾವು ಇಲ್ಲಿ ಸೇರಿದ್ದೇವೆ. ಮಸೀದಿಗಾಗಿ ಅಲ್ಲ. ನಿಮ್ಮ ಅಭಿಪ್ರಾಯಕ್ಕೆ ನಮ್ಮ ಸಹಮತವಿಲ್ಲ’ ಎಂದು ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ಹಂಸದೇವಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದರು.

***

ಮಂದಿರ ಧ್ವಂಸ ಮಾಡಿ ಮಸೀದಿ ನಿರ್ಮಿಸಲು ಬಾಬರ್‌ ಕೋರ್ಟ್ ಅನುಮತಿ ಪಡೆದಿದ್ದನೆ? ಮಂದಿರ ನಿರ್ಮಾಣಕ್ಕೂ ನಮಗೆ ಕೋರ್ಟ್ ಒಪ್ಪಿಗೆ ಬೇಕಾಗಿಲ್ಲ

ಸ್ವಾಮಿ ಹಂಸದೇವಾಚಾರ್ಯ, ವಿಎಚ್‌ಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.