ADVERTISEMENT

ಮಂದಿರ ನಿರ್ಮಾಣ ಯಾವಾಗ: ವರಿಷ್ಠರಿಗೆ ಬಿಜೆಪಿ ಸಂಸದರ ಪ್ರಶ್ನೆ

ಪಿಟಿಐ
Published 18 ಡಿಸೆಂಬರ್ 2018, 18:45 IST
Last Updated 18 ಡಿಸೆಂಬರ್ 2018, 18:45 IST

ನವದೆಹಲಿ: ಐದು ರಾಜ್ಯಗಳ ಸೋಲಿನ ನಂತರ ಮೊದಲ ಬಾರಿಗೆ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯ ಪ್ರತಿಧ್ವನಿಸಿದೆ.

ಗೃಹ ಸಚಿವ ರಾಜನಾಥ್‌ ಸಿಂಗ್‌ ಭಾಷಣ ಆರಂಭಿಸುತ್ತಿದ್ದಂತೆಯೇ ಬಿಜೆಪಿಯ ಹೆಚ್ಚಿನ ಸಂಸದರು, ‘ಮಂದಿರ ನಿರ್ಮಾಣ ಯಾವಾಗ‘ ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶದ ಸಂಸದರಾದ ರವೀಂದ್ರ ಕುಶ್ವಾಹ ಹಾಗೂ ಹರಿ ನಾರಾಯಣ ರಾಜಭರ್‌ ಎತ್ತಿದ ಪ್ರಶ್ನೆಗೆ ಇತರ ಸಂಸದರು ಧ್ವನಿಗೂಡಿಸಿದರು.

ADVERTISEMENT

‘ಮಂದಿರ ನಿರ್ಮಾಣ ಆಗಲೇಬೇಕು ಎಂಬುವುದು ಎಲ್ಲರ ಬಯಕೆಯಾಗಿದೆ. ನೀವು ತಾಳ್ಮೆಯಿಂದ ಇರಬೇಕು’ ಎಂದು ಸಿಂಗ್‌ ಸಮಾಧಾನಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಐದು ರಾಜ್ಯಗಳಲ್ಲಿ ಸೋತಿರುವ ಬಿಜೆಪಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಕಠಿಣ ಸವಾಲು ಎದುರಾಗಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಮಂದಿರ ನಿರ್ಮಾಣಕ್ಕೆ ಮುಂದಾದರೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ಸಿಗಲಿದೆ ಎಂದು ಕೆಲವು ಸಂಸದರು ಸಲಹೆ ನೀಡಿದರು.

‘ವಿರೋಧ ಪಕ್ಷಗಳಿಗಿಂತ ನಾವು ಬಹಳ ಮುಂದಿದ್ದೇವೆ. ಈಗ ನಮಗೆ ಅನುಕೂಲಕರ ವಾತಾವರಣವಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.