ADVERTISEMENT

‘ಮಾಯಾವತಿ ದಲಿತ ಸಮುದಾಯದ ಗಟ್ಟಿ ಮಹಿಳೆ’: ರಾಮದಾಸ್‌ ಅಠವಾಲೆ

‘ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮಹಿಳೆಯೋ ಪುರುಷನೋ’ ಎಂದಿದ್ದ ಬಿಜೆಪಿ ಶಾಸಕಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 11:22 IST
Last Updated 20 ಜನವರಿ 2019, 11:22 IST
   

ಲಖನೌ: ಉತ್ತರಪ್ರದೇಶದ ಮೊಘಲ್‌ಸರಾಯ್‌ ಕ್ಷೇತ್ರದ ಶಾಸಕಿ ಸಾಧನಾ ಸಿಂಗ್‌ ಅವರು ಬಿಎಸ್‌ಪಿ ನಾಯಕಿಯ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ರಾಮದಾಸ್‌ ಅಠವಾಲೆ, ಮಾಯಾವತಿ ಅವರನ್ನು ‘ದಲಿತ ಸಮುದಾಯದ ಗಟ್ಟಿ ಮಹಿಳೆ’ ಎಂದು ಕರೆದಿದ್ದಾರೆ.

ಸಿಂಗ್‌ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮಾಯಾವತಿ ದಲಿತ ಸಮುದಾಯದ ಗಟ್ಟಿ ಮಹಿಳೆ. ಉತ್ತಮ ಆಡಳಿತಗಾರ್ತಿಯೂ ಹೌದು. ಅವರ ಬಗೆಗಿನ ಯಾವುದೇ ಅವಹೇಳನಕಾರಿ ಹೇಳಿಕೆಯೂ ಖಂಡನಾರ್ಹ’ ಎಂದರು.

‘ನನ್ನ ಪಕ್ಷವು ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿರಬಹುದು. ಆದರೂ ಇಂತಹ ಹೇಳಿಕೆಗಳನ್ನು ನೀಡುವುದು ಖಂಡನೀಯ’ ಎಂದುರಿಪಬ್ಲಿಕನ್‌ ಪಕ್ಷದ ಮುಖ್ಯಸ್ಥರೂ ಆಗಿರುವ ಅಠವಾಲೆ ಅಭಿಪ್ರಾಯಪಟ್ಟರು.

ADVERTISEMENT

ಉತ್ತರ ಪ್ರದೇಶದ ಚಾಂಡೌಲಿ ಜಿಲ್ಲೆಯಲ್ಲಿ ಶನಿವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಸಾಧನಾ ಸಿಂಗ್‌, ‘ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ(ಮಾಯವತಿ) ಮಹಿಳೆಯೋ.. ಪುರುಷನೋ.. ಎಂಬುದು ಗೊತ್ತಿಲ್ಲ.ಅವರಿಗೆ ಘನತೆ ಎಂಬುದರ ಪರಿಜ್ಞಾನವೇ ಇಲ್ಲ. ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ದ್ರೌಪದಿ ಪ್ರತೀಕಾರದ ಪ್ರತಿಜ್ಞೆ ಮಾಡಿದಳು. ಆಕೆ ಆತ್ಮಗೌರವ ಹೊಂದಿರುವ ಮಹಿಳೆ. ಈ ಮಹಿಳೆ(ಮಾಯಾವತಿ)ಯನ್ನು ನೋಡಿ, ಅಧಿಕಾರಕ್ಕಾಗಿ ಘನತೆಯನ್ನೇ ಮಾರಿಕೊಂಡಿದ್ದಾರೆ’ಎಂದು ಹರಿಹಾಯ್ದಿದ್ದರು.

ಟೀಕಾಪ್ರಹಾರ ಮುಂದುವರಿಸಿದ್ದ ಸಿಂಗ್‌,‘ತನ್ನನ್ನು ತಾನು ಮಹಿಳೆ ಎಂದು ಕರೆದುಕೊಳ್ಳುವ ಮಾಯಾವತಿಯವರನ್ನು ಜರಿಯಲು ಈ ಅವಕಾಶ ಬಳಸಿಕೊಳ್ಳುತ್ತಿದ್ದೇನೆ. ಅವರು ಇಡೀ ಮಾನವಕುಲಕ್ಕೇ ಕಪ್ಪುಚುಕ್ಕೆ ಇದ್ದಂತೆ. ಬಿಜೆಪಿ ನಾಯಕರು ಆಕೆಯ ಘನತೆಯನ್ನು ಕಾಪಾಡಿದ್ದರು. ಆದರೆ, ಅವರು(ಮಾಯಾವತಿ) ತಮ್ಮ ಅನುಕೂಲಕ್ಕಾಗಿ, ಅಧಿಕಾರಕ್ಕಾಗಿ ಎಲ್ಲವನ್ನೂ ಮಾರಿಕೊಂಡಿದ್ದಾರೆ. ಅವರನ್ನು ದೇಶದ ಮಹಿಳೆಯರೆಲ್ಲಾ ಖಂಡಿಸಬೇಕು’ ಎಂದು ಆಗ್ರಹಿಸಿದ್ದರು.

ಸಿಂಗ್‌ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಆರ್‌ಎಲ್‌ಡಿ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ಜಯಂತ್‌ ಚೌಧರಿ, ‘ಮೊಘಲ್‌ಸರಾಯ್‌ ಶಾಸಕಿ ನೀಡಿರುವ ಹೇಳಿಕೆಯು ಬಿಜೆಪಿ ಹಿರಿಯ ನಾಯಕರ ಸಣ್ಣಮಟ್ಟದ ಚಿಂತನೆಯನ್ನು ಪ್ರತಿನಿಧಿಸುತ್ತದೆ. ಒಂದು ಸಮುದಾಯದ ಬಗ್ಗೆ ಪಕ್ಷ ಹೊಂದಿರುವ ದೃಷ್ಟಿಕೋನವನ್ನೂ ಇದು ತೋರುತ್ತದೆ’ ಎಂದು ಟ್ವೀಟರ್‌ನಲ್ಲಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.