ADVERTISEMENT

ಸಚಿವ ಸ್ಥಾನ ಕೊಡಿಸುವಂತೆ ಮುಖಂಡರಿಗೆ ಮನವಿ?

ಮತ್ತೆ ಫಡಣವಿಸ್ ಭೇಟಿ ಮಾಡಿದ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 21:52 IST
Last Updated 29 ಜೂನ್ 2021, 21:52 IST
ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ
ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ   

ನವದೆಹಲಿ: ಮಂಗಳವಾರ ಮಧ್ಯಾಹ್ನ ದಿಢೀರ್ ಇಲ್ಲಿಗೆ ಬಂದಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಬಿಜೆಪಿ ಮುಖಂಡ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರನ್ನು ಸಂಜೆ ಭೇಟಿ ಮಾಡಿ ಚರ್ಚಿಸಿದರು.

ಮಧ್ಯಾಹ್ನ ಬೆಂಗಳೂರಿನಿಂದ ಇಲ್ಲಿಗೆ ಬಂದ ಅವರು, ಆರ್‌ಎಸ್‌ಎಸ್‌ ಮುಖಂಡರೊಬ್ಬರ ನಿವಾಸದಲ್ಲಿದ್ದ ಫಡಣವಿಸ್ ಅವರೊಂದಿಗೆ 45 ನಿಮಿಷ ಮಾತುಕತೆ ನಡೆಸಿದರು.

‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾಗಿರುವ ಲೈಂಗಿಕ ಸಿ.ಡಿ. ಬಿಡುಗಡೆ ಪ್ರಕರಣದಿಂದ ಖುಲಾಸೆಗೊಳಿಸಿ, ಮತ್ತೆ ಸಚಿವ ಸ್ಥಾನ ಕೊಡಿಸಬೇಕು’ ಎಂದು ಅವರು ಫಡಣವಿಸ್ ಬಳಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಕಳೆದ ವಾರವೂ ಫಡಣವಿಸ್‌ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದ ಜಾರಕಿಹೊಳಿ, ದೆಹಲಿಯಲ್ಲಿ ಬಿಜೆಪಿಯ ಇನ್ನೂ ಕೆಲವು ಹಿರಿಯ ಮುಖಂಡರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಫಡಣವಿಸ್‌ ಭೇಟಿಗೂಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿನ್ನೆ ರಾತ್ರಿ ನನಗೆ ಪ್ರಮುಖರೊಬ್ಬರಿಂದ ಕರೆ ಬಂದಿದ್ದು, ಅವರ ಭೇಟಿಗೆ ಬಂದಿದ್ದೇನೆ’ ಎಂದು ಹೇಳಿದ್ದರು.

‘ನಾನು ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ನನಗೆ ಅನ್ಯಾಯ ಆಗಿಲ್ಲ. ಪಕ್ಷದಲ್ಲಿ ಇರುವ ಮೂವರು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲೆಂದೇ ಇಲ್ಲಿಗೆ ಬಂದಿದ್ದೇನೆ. ಶೀಘ್ರವೇ ನಿಮಗೆ ವಿಷಯ ತಿಳಿಯಲಿದೆ’ ಎಂದು ಮೂವರ ಹೆಸರು ಬಹಿರಂಗ ಪಡಿಸದೇ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದರು.

ಎರಡು ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ಸೂತ್ತೂರು ಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಬಂದಿದ್ದ ರಮೇಶ್‌ ಜಾರಕಿಹೊಳಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.