ಮುಂಬೈ,: 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹವ್ವುರ್ ಹುಸೇನ್ ರಾಣಾ ಹಸ್ತಾಂತರವನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ಸವಾಗತಿಸಿದ್ದಾರೆ.
ಇದು ಒಳ್ಳೆಯ ವಿಷಯ ಎಂದು ಅಹಮದಾಬಾದ್‌ನಲ್ಲಿ ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಿದ್ದ ಶಿಂಧೆ ಸುದ್ದಿಗಾರರಿಗೆ ತಿಳಿಸಿದ್ದಾರೆ. 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಶಿಂಧೆ ಕೇಂದ್ರ ಗೃಹ ಸಚಿವರಾಗಿದ್ದರು. ಭಯೋತ್ಪಾದಕ ದಾಳಿ ನಡೆಸಿದ ಪಾಕಿಸ್ತಾನಿ ಉಗ್ರರ ಪೈಕಿ ವಂತವಾಗಿ ಸೆರೆ ಸಿಕ್ಕ ಏಕೈಕ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್‌ನನ್ನು ಪುಣೆಯ ಯೆರವಡಾ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.
ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ರಾಣಾ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಗಡೀಪಾರು ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನ ವಿಫಲವಾದ ಬಳಿಕ ಭಾರತಕ್ಕೆ ಕರೆತರಲಾಗುತ್ತಿದೆ.
64 ವರ್ಷದ ರಾಣಾ ಇಂದು ನವದೆಹಲಿಗೆ ತಲುಪುವ ನಿರೀಕ್ಷೆಯಿದೆ. ಬಳಿಕ, ತಿಹಾರ್ ಜೈಲಿನಲ್ಲಿರುವ ಹೈ ಸೆಕ್ಯುರಿಟಿ ವಾರ್ಡ್‌ನಲ್ಲಿ ಇರಿಸುವ ಸಾಧ್ಯತೆಯಿದೆ. ರಾಣಾ ಪಾಕಿಸ್ತಾನದಲ್ಲಿ ಜನಿಸಿದ ಕೆನಡಾದ ಪ್ರಜೆಯಾಗಿದ್ದು, 2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ನಿಕಟ ಸಹಚರನಾಗಿದ್ದಾನೆ.
ರಾಣಾ ಹಸ್ತಾಂತರವು ಭಯೋತ್ಪಾದನೆಯನ್ನು ಪಾಕಿಸ್ತಾನದ ಪಾತ್ರ ಬಹಿರಂಗಪಡಿಸಲು ಮತ್ತು 26/11 ಭಯೋತ್ಪಾದಕ ದಾಳಿಯ ಎಲ್ಲ ಮಾಸ್ಟರ್ ಮೈಂಡ್‌ಗಳ ಹೆಸರುಗಳನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ ಎಂದು ಎನ್‌ಸಿಪಿ (ಎಸ್‌ಪಿ) ಮಹಾರಾಷ್ಟ್ರ ಘಟಕದ ಅಧ್ಯಕ್ಷ ಮತ್ತು ಮಾಜಿ ಗೃಹ ಸಚಿವ ಜಯಂತ್ ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ. ಸರಿಯಾದ ವಿಚಾರಣೆ ನಡೆಸಬೇಕು ಎಂದು ಪಾಟೀಲ್ ಹೇಳಿದರು.
ರಾಣಾ ಅವರ ಹಸ್ತಾಂತರವು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಮುಂಬೈ ನಗರಕ್ಕೆ ನ್ಯಾಯ ದೊರಕಿಸಿಕೊಡುವತ್ತ ಒಂದು ಹೆಜ್ಜೆಯಾಗಿದೆ ಎಂದು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
2008ರ ನವೆಂಬರ್ 26ರಂದು, 10 ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಅರಬ್ಬಿ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ನುಗ್ಗಿ, ಒಂದು ರೈಲ್ವೆ ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳು ಮತ್ತು ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿತ್ತು. ಸುಮಾರು 60 ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ 166 ಜನರು ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.