ADVERTISEMENT

1982ರಲ್ಲಿ ಗಲ್ಲಿಗೇರಿದ್ದ ರಂಗಾ, ಬಿಲ್ಲಾ

ಅತ್ಯಾಚಾರವೆಸಗಿ ಕೊಲೆಗೈದಿದ್ದ ಅಪರಾಧಿಗಳು

ಪಿಟಿಐ
Published 20 ಮಾರ್ಚ್ 2020, 23:17 IST
Last Updated 20 ಮಾರ್ಚ್ 2020, 23:17 IST
ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿ ತಿಹಾರ್ ಜೈಲಿನ ಎದುರು ಭಿತ್ತಿ ಫಲಕ ಪ್ರದರ್ಶನ
ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿ ತಿಹಾರ್ ಜೈಲಿನ ಎದುರು ಭಿತ್ತಿ ಫಲಕ ಪ್ರದರ್ಶನ   

ನವದೆಹಲಿ: ಅತ್ಯಾಚಾರ ಮತ್ತು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ 38 ವರ್ಷಗಳ ಹಿಂದೆ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.ನಿರ್ಭಯಾ ಪ್ರಕರಣದ ರೀತಿಯಲ್ಲೇ ಈ ಅಪರಾಧಿಗಳು ಕೃತ್ಯವೆಸಗಿದ್ದರು.

1978ರಲ್ಲಿ ರಂಗಾ ಮತ್ತು ಬಿಲ್ಲಾ ಎನ್ನುವವರು ದೆಹಲಿಯ ಹೃದಯಭಾಗದಿಂದ ಇಬ್ಬರು ಮಕ್ಕಳನ್ನು (ಸಹೋದರ, ಸಹೋದರಿ) ಹಣಕ್ಕಾಗಿ ಅಪಹರಿಸಿದ್ದರು. ಅವರು ನೌಕಾಪಡೆ ಅಧಿಕಾರಿಯ ಮಕ್ಕಳಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಹೆದರಿದ ರಂಗಾ ಮತ್ತು ಬಿಲ್ಲಾ, ಇಬ್ಬರೂ ಮಕ್ಕಳಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದರು. ಬಾಲಕಿಯ ಮೇಲೆ ಕೊಲೆಗೆ ಮುನ್ನ ಅತ್ಯಾಚಾರವೆಸಗಿದ್ದರು.

ಕುಲಜೀತ್‌ ಸಿಂಗ್‌ ಅಲಿಯಾಸ್‌ ರಂಗಾ ಖುಸ್‌ ಮತ್ತು ಜಸ್ಬೀರ್‌ ಸಿಂಗ್‌ ಅಲಿಯಾಸ್‌ ಬಿಲ್ಲಾಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. 1982ರ ಜನವರಿ 31ರಂದು ಇವರನ್ನು ಗಲ್ಲಿಗೇರಿಸಲಾಯಿತು.

ADVERTISEMENT

ರಂಗಾ ಮತ್ತು ಬಿಲ್ಲಾನನ್ನು ಗಲ್ಲಿಗೇರಿಸಲು ಫರೀದ್‌ಕೋಟ್‌ ಮತ್ತು ಮೀರತ್ ಜೈಲುಗಳಿಂದ ಫಕೀರಾ ಮತ್ತು ಕಲು ಎನ್ನುವವರನ್ನು ಕರೆಸಲಾಗಿತ್ತು. ಗಲ್ಲಿಗೇರಿಸುವ ಮುನ್ನ ಇಬ್ಬರಿಗೂ ಚಹಾ ನೀಡಲಾಗಿತ್ತು ಎಂದು ತಿಹಾರ್‌ ಜೈಲಿನ ಮಾಜಿ ಕಾನೂನು ಅಧಿಕಾರಿ ಸುನೀಲ್‌ ಗುಪ್ತಾ ಮತ್ತು ಪತ್ರಕರ್ತರಾದ ಸುನೇತ್ರಾ ಚೌಧರಿ ಬರೆದಿರುವ ‘ಬ್ಲಾಕ್‌ ವಾರಂಟ್‌’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಗಲ್ಲಿಗೇರಿಸಲು ಅನುಕೂಲವಾಗುವಂತೆ ಬಾವಿಯನ್ನು ನಿರ್ಮಿಸಲಾಗಿತ್ತು. ಇಬ್ಬರನ್ನು ಗಲ್ಲಿಗೇರಿಸಿ ದೇಹಗಳು ಬಾವಿಯಲ್ಲಿ ತೂಗಾಡತೊಡಗಿದ ಎರಡು ಗಂಟೆ ಬಳಿಕ ವೈದ್ಯರು ತಪಾಸಣೆ ಮಾಡಿದರು. ಆದರೆ, ರಂಗನ ನಾಡಿ ಇನ್ನೂ ಮಿಡಿಯುತ್ತಿತ್ತು. ಆಗ ಸಿಬ್ಬಂದಿಯೊಬ್ಬರನ್ನು ಬಾವಿಯಲ್ಲಿ ಇಳಿಸಿ ರಂಗನ ಕಾಲುಗಳನ್ನು ಎಳೆಸಲಾಯಿತು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ಚಿದಂಬರಂ ಪ್ರಕರಣದಲ್ಲಿ ಪ್ರಸ್ತಾಪ!

ಕಳೆದ ವರ್ಷ ನವೆಂಬರ್‌ನಲ್ಲಿ ಐಎನ್‌ಎಕ್ಸ್‌ ಮಿಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಪಿ. ಚಿದಂಬರಂ ಅವರಿಗೆ ಸುಪ್ರಿಂ ಕೋರ್ಟ್‌ ಜಾಮೀನು ಕೋರುವ ಸಂದರ್ಭದಲ್ಲಿ ರಂಗಾ ಮತ್ತು ಬಿಲ್ಲಾ ಪ್ರಕರಣ ಪ್ರಸ್ತಾಪವಾಗಿತ್ತು.

ಗಲ್ಲು ಶಿಕ್ಷೆ ಜಾರಿ: ಬಾಲಿವುಡ್ ಪ್ರತಿಕ್ರಿಯೆ

ಮುಂಬೈ: ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡಿರುವುದನ್ನು ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್‌ ಸೇರಿದಂತೆ ಹಲವು ನಟ, ನಟಿಯರು ಶ್ಲಾಘಿಸಿದ್ದಾರೆ.

‘ಅತ್ಯಾಚಾರಿಗಳಿಗೆ ಮರಣದಂಡನೆ ಜಾರಿ ಮಾಡಿರುವುದು ಭಾರತಕ್ಕಷ್ಟೇ ಅಲ್ಲ ಜಗತ್ತಿಗೇ ಪಾಠವಾಗಿದೆ. ಸ್ತ್ರೀತ್ವವನ್ನು ಗೌರವಿಸಿ. ಶಿಕ್ಷೆ ಜಾರಿ ವಿಳಂಬವಾಗಲು ಕಾರಣರಾದವರಿಗೆ ನಾಚಿಕೆಯಾಗಬೇಕು‘ ಎಂದು ರಿಷಿ ಕಪೂರ್‌ ಹೇಳಿದ್ದಾರೆ. ‘ಸಂತ್ರಸ್ತೆಯ ಕುಟುಂಬದ ದೀರ್ಘ ಹೋರಾಟ ಕೊನೆಗೂ ಅಂತ್ಯವಾಗಿದೆ’ ಎಂದು ನಟಿ ತಾಪ್ಸಿ ಪನ್ನು ಟ್ವೀಟ್‌ ಮಾಡಿದ್ದಾರೆ.

‘ಇಂತಹ ಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯದಾನ ಮಾಡುವ ವ್ಯವಸ್ಥೆ ಭವಿಷ್ಯದಲ್ಲಿ ಜಾರಿಯಾಗಲಿ’ ಎಂದು ರವೀನಾ ಟಂಡನ್‌ ಹೇಳಿದ್ದಾರೆ. ‘ಒಂದು ವೇಳೆ 2012ರಲ್ಲಿಯೇ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಿದ್ದರೆ, ಮಹಿಳೆಯರ ಮೇಲಿನ ಅಪರಾಧಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತು’ ಎಂದು ಪ್ರೀತಿ ಜಿಂಟಾ ಟ್ವೀಟ್ ಮಾಡಿದ್ದಾರೆ.

‘ಕಠಿಣ ಶಿಕ್ಷೆ, ತ್ವರಿತ ನ್ಯಾಯದಾನದಿಂದ ಮಾತ್ರ ಇಂತಹ ರಾಕ್ಷಸರಲ್ಲಿ ಭಯ ಹುಟ್ಟಿಸಲು ಸಾಧ್ಯ’ ಎಂದು ರಿತೇಶ್‌ ದೇಶ್‌ಮುಖ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.