ಕೇಂದ್ರಪುರ: ‘ಒಡಿಶಾದ ಕೇಂದ್ರಪುರ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ ಏಳು ವರ್ಷದ ಬಳಿಕ ಸಿಕ್ಕಿ ಬಿದ್ದಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
‘2014ರಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆರೋಪಿಯು ಬೆಂಗಳೂರಿಗೆ ಓಡಿಹೋಗಿದ್ದ. ಅಲ್ಲಿ ಆತ ಪ್ಲಂಬರ್ ವೃತ್ತಿಯಲ್ಲಿ ತೊಡಗಿದ್ದ’ ಎಂದು ಅಧಿಕಾರಿಗಳು ಸೋಮವಾರ ಹೇಳಿದರು.
‘ಆರೋಪಿಯನ್ನು ಬೆಂಗಳೂರಲ್ಲಿ ಭಾನುವಾರ ಬಂಧಿಸಿ, ಸೋಮವಾರ ಇಲ್ಲಿಗೆ ಕರೆತರಲಾಯಿತು. ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪಟ್ಟಮುಂಡೈ ಪೊಲೀಸ್ ಠಾಣೆಯ ಅಧಿಕಾರಿ ರಾಕೇಶ್ ತ್ರಿಪಾಠಿ ಮಾಹಿತಿ ನೀಡಿದರು.
‘ಪಟ್ಟಮುಂಡೈ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ನೇತೃತ್ವದ ತಂಡವು ಏಳು ವರ್ಷದ ಬಳಿಕ ಆರೋಪಿಯನ್ನು ಬಂಧಿಸಿದೆ.ಇದೊಂದು ಮಹತ್ತರ ಸಾಧನೆ’ ಎಂದು ಕೇಂದ್ರಪುರ ಪೊಲೀಸ್ ವಿಭಾಗವು ಟ್ವೀಟ್ ಮಾಡಿದೆ.
‘ಈ ಪ್ರಕರಣದಡಿ 2019ರಲ್ಲಿಯೂ ಒಬ್ಬ ಆರೋಪಿಯನ್ನು ನವದೆಹಲಿಯಲ್ಲಿ ಬಂಧಿಸಲಾಗಿತ್ತು. 2015ರಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯು ಮಗುವಿಗೆ ಜನ್ಮ ನೀಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.