ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್

ಪಿಟಿಐ
Published 30 ಜನವರಿ 2019, 18:42 IST
Last Updated 30 ಜನವರಿ 2019, 18:42 IST
   

ವಯನಾಡು, ಕೇರಳ: ಬುಡಕಟ್ಟು ಸಮುದಾಯದ ಬಾಲಕಿ ಮೇಲೆ ಕಳೆದ ಒಂದು ವರ್ಷದಿಂದ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಒ.ಎಂ. ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಾಲಕಿಯ ಪೋಷಕರು ನೀಡಿರುವ ದೂರು ಆಧರಿಸಿ ಜಾರ್ಜ್ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ(ಪೋಕ್ಸೊ), ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಮತ್ತು ಅತ್ಯಾಚಾರ ಆರೋಪದ ಪ್ರಕರಣಗಳನ್ನು ದಾಖಲಿಸಲಾಗಿದೆ. ಜಾರ್ಜ್ ಕರ್ನಾಟಕದಲ್ಲಿ ತಲೆಮರೆಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮುಜುಗರದಿಂದ ಪಾರಾಗಲು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಲಪಲ್ಲಿ ರಾಮಚಂದ್ರನ್ ಅವರು ಜಾರ್ಜ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಾರೆ. ಯಾವುದೇ ಆರೋಪಿಯನ್ನೂ ಪಕ್ಷ ರಕ್ಷಣೆ ಮಾಡುವುದಿಲ್ಲ ಎಂದಿದ್ದಾರೆ.

ADVERTISEMENT

‘17 ವರ್ಷದ ಬಾಲಕಿಯ ಪೋಷಕರು ಜಾರ್ಜ್ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಜೊತೆಯಲ್ಲೆ ಮಗಳು ಕೂಡ ಇದ್ದಳು. ದೂರವಾಣಿ ಮೂಲಕವೂ ಬಾಲಕಿಗೆ ಜಾರ್ಜ್ ಬೆದರಿಕೆ ಹಾಕುತ್ತಿದ್ದರು. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ನಮಗೆ ‌ವಿಷಯ ತಿಳಿಯಿತು’ ಎಂದು ಬಾಲಕಿಯ ತಂದೆ ಟಿ.ವಿ ಮಾಧ್ಯಮಗಳಿಗೆ ತಿಳಿಸಿದರು.

ಪ್ರಕರಣ ವಾಪಸ್ ಪಡೆಯಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಹಣದ ಆಮಿಷವನ್ನೂ ಒಡ್ಡುತ್ತಿದ್ದಾರೆ ಎಂದು ದೂರಿದರು.

ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕಳೆದ ಫೆಬ್ರುವರಿಯಿಂದಲೂ ಕಿರುಕುಳ ನೀಡುತ್ತಿದ್ದರು ಎಂಬುದನ್ನು ಬಾಲಕಿ ಹೇಳಿದ್ದಾಳೆ ಎಂದು ಪೊಲೀಸರು ವಿವರಿಸಿದರು. ಈ ಬಗ್ಗೆ ಪಕ್ಷದ ಬ್ಲಾಕ್,ಮಂಡಲಸಮಿತಿಯಿಂದ ವರದಿ ಕೇಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.