ಪುರಿ: ‘ನವಮಿ ತಿಥಿ’ಯ ಸಂದರ್ಭದಲ್ಲಿ ‘ಸಂಧ್ಯಾ ದರ್ಶನ’ಕ್ಕಾಗಿ ಇಲ್ಲಿನ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಶನಿವಾರ ‘ಬಹುದ ಯಾತ್ರೆ’ ನಡೆಯಲಿರುವುದರಿಂದ ಜನ್ಮಸ್ಥಳದಲ್ಲಿ ಬಲಭದ್ರ, ದೇವಿ ಸುಭದ್ರ ಹಾಗೂ ಸ್ವಾಮಿ ಜಗನ್ನಾಥ ದೇವರ ದರ್ಶನ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು.
ಬಹುದ ಯಾತ್ರೆಯೊಂದಿಗೆ ಎಲ್ಲಾ ದೇವರುಗಳನ್ನು ಮೂಲ ನಿವಾಸ ಎನ್ನಲಾಗುವ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಜೂನ್ 27ರಂದು ಆರಂಭವಾದ 9 ದಿನದ ಯಾತ್ರೆಯು ಶನಿವಾರ ಮುಕ್ತಾಯವಾಗಲಿದೆ. ದರ್ಶನ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಡಿಜಿಪಿ ವೈ.ಬಿ ಖುರಾನಿಯಾ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿ ಮೇಲ್ವಿಚಾರಣೆ ನಡೆಸಿದರು.
‘ಭಕ್ತರು ಸರತಿ ಸಾಲಿನಲ್ಲಿ ದರ್ಶನ ಪಡೆಯುತ್ತಿದ್ದು, ಮುಂಜಾನೆಯಿಂದಲೂ ದರ್ಶನ ಸುಗಮವಾಗಿ ನಡೆಯುತ್ತಿದೆ. ಭಕ್ತರ ಭದ್ರತೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಖಿರಾನಿಯಾ ಹೇಳಿದರು.
ಶುಕ್ರವಾರ ಸಂಜೆ 6 ಗಂಟೆವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿತು.
‘ಪ್ರತಿ ವರ್ಷ, ಆಷಾಢ ಶುಕ್ಲ ಪಕ್ಷ ನವಮಿ ತಿಥಿಯಂದು ಗುಂಡಿಚಾ ದೇವಸ್ಥಾನದಲ್ಲಿ ‘ಸಂಧ್ಯಾ ದರ್ಶನ’ ನಡೆಯುತ್ತದೆ. 9 ದಿನಗಳ ರಥ ಯಾತ್ರೆಯಲ್ಲಿ ಇದು ಪವಿತ್ರ ದಿನವಾಗಿದೆ’ ಎಂದು ಪಂಡಿತ್ ಸೂರ್ಯನಾರಾಯಣ ರಥ್‌ಶರ್ಮಾ ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪುರಿ ನಗರದಲ್ಲಿ ಹೋಟೆಲ್‌ಗಳ ತಪಾಸಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಭಾನುವಾರ ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು. ಬಳಿಕ ದೇವಾಲಯದ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.