ADVERTISEMENT

ಜನರ ಸಮಸ್ಯೆಗಳಿಗೆ ಬಿಜೆಪಿ ಈಗಲೂ ನೆಹರು ಅವರನ್ನು ಟೀಕಿಸುತ್ತಿದೆ: ಮನಮೋಹನ್ ಸಿಂಗ್

ಪಿಟಿಐ
Published 17 ಫೆಬ್ರುವರಿ 2022, 13:47 IST
Last Updated 17 ಫೆಬ್ರುವರಿ 2022, 13:47 IST
ಮಾಜಿ ಪ್ರಧಾನಿ ಮನಮೋಹನ್ ಸಿಂಗ್: ಪಿಟಿಐ ಚಿತ್ರ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್: ಪಿಟಿಐ ಚಿತ್ರ   

ನವದೆಹಲಿ: ಕಳೆದ 7 ವರ್ಷಗಳಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಜನರ ಸಮಸ್ಯೆಗಳಿಗಾಗಿ ಈಗಲೂ ದೇಶದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರು ಅವರನ್ನು ಬಿಜೆಪಿ ಟೀಕಿಸುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರೈತರ ಪ್ರತಿಭಟನೆ, ವಿದೇಶಿ ನೀತಿ, ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳದ ಕುರಿತಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿಯ ರಾಷ್ಟ್ರೀಯತೆ ಬ್ರಿಟಿಷರ ‘ಒಡೆದು ಆಳುವ ನೀತಿ’ಮೇಲೆ ಆಧಾರಿತವಾಗಿದೆ ಎಂದು ಟೀಕಿಸಿದ್ದಾರೆ.

ವಿದೇಶಾಂಗ ನೀತಿಯ ವಿಷಯದಲ್ಲಿ ಸರ್ಕಾರವು 'ಸಂಪೂರ್ಣ ವಿಫಲವಾಗಿದೆ’ಎಂಬುದು ಸಾಬೀತಾಗಿದೆ. ಚೀನಾ ಸೇನೆಯು ಕಳೆದ ಒಂದು ವರ್ಷದಿಂದ ನಮ್ಮ ಪುಣ್ಯ ಭೂಮಿಯನ್ನು ವಶಪಡಿಸಿಕೊಂಡಿದೆ. ಆದರೆ, ಈ ಸಮಸ್ಯೆಯನ್ನು ಮರೆಮಾಚುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

‘ನೆರೆ ದೇಶಗಳ ಜೊತೆ ನಮ್ಮ ಬಾಂಧವ್ಯವೂ ಹಾಳಾಗುತ್ತಿದೆ’ಎಂದು ಹೇಳಿದ್ಧಾರೆ.

ADVERTISEMENT

ದೇಶದ ಸಂವಿಧಾನದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ನಂಬಿಕೆ ಇಲ್ಲ. ನಮ್ಮ ಸಂಸ್ಥೆಗಳು ನಿಯಮಿತವಾಗಿ ದುರ್ಬಲಗೊಳ್ಳುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಒಂದು ಕಡೆ ಬೆಲೆ ಏರಿಕೆ, ನಿರುದ್ಯೋಗ ಮತ್ತು ಇತರೆ ಸಮಸ್ಯೆಗಳಿಂದ ಜನ ತತ್ತರಿಸುತ್ತಿದ್ದರೆ, ಮತ್ತೊಂದು ಕಡೆ, ಕಳೆದ 7 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ, ತಮ್ಮ ತಿದ್ದುಪಡಿ ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳದೆ ಈಗಲೂ ಜನರ ಸಮಸ್ಯೆಗಳಿಗೆ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರನ್ನು ಟೀಕಿಸುತ್ತಿದೆ’ಎಂದು ವಿಡಿಯೊ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

‘ಕೆಲ ದಿನಗಳ ಹಿಂದೆ ಪ್ರಧಾನಿ ಭದ್ರತೆಯ ಕಾರಣವೊಡ್ಡಿ, ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ರಾಜ್ಯದ ಜನರಿಗೆ ಮಸಿ ಬಳಿಯುವ ಪ್ರಯತ್ನ ನಡೆಯಿತು’ಎಂದು ಟೀಕಿಸಿದ್ದಾರೆ.

ರೈತರ ಆಂದೋಲನದ ಸಂದರ್ಭದಲ್ಲೂ ಪಂಜಾಬ್ ಮತ್ತು ಪಂಜಾಬಿಯತ್ ಅನ್ನು ದೂಷಿಸಲು ಪ್ರಯತ್ನಿಸಲಾಯಿತು ಎಂದು ಅವರು ಹೇಳಿದರು.

‘ಪಂಜಾಬಿಗಳ ಧೈರ್ಯ, ದೇಶಪ್ರೇಮ ಮತ್ತು ತ್ಯಾಗವನ್ನು ವಿಶ್ವವೇ ಕೊಂಡಾಡುತ್ತದೆ. ಆದರೆ, ಎನ್‌ಡಿಎ ಸರ್ಕಾರ ಈ ಬಗ್ಗೆ ಮಾತನಾಡುವುದೇ ಇಲ್ಲ. ಪಂಜಾಬ್ ಮೂಲದ ಒಬ್ಬ ನಿಜವಾದ ಭಾರತೀಯನಾಗಿ ಇವೆಲ್ಲವೂ ನನಗೆ ಅತೀವ ದುಃಖ ತಂದಿವೆ’ ಎಂದು ಸಿಂಗ್ ಹೇಳಿದ್ದಾರೆ.

ಪಂಜಾಬ್ ಜನರ ಮುಂದೆ ಹಲವು ಸವಾಲುಗಳಿವೆ. ಅವುಗಳನ್ನು ಪರಿಣಾಮಕಾರಿ ಎದುರಿಸಬೇಕಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.