ADVERTISEMENT

ಮುಂಬೈ ದಾಳಿಗೆ ಯುಪಿಎ ಪ್ರತಿಕ್ರಿಯೆ ಜಡ; ಕಾಂಗ್ರೆಸ್‌ಗೆ ಮುಜುಗರ ತಂದ ಮನೀಶ್‌ ಕೃತಿ

ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ತಳ್ಳಿದ ಸಂಸದ ಮನೀಶ್‌ ತಿವಾರಿ ನೂತನ ಕೃತಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 20:00 IST
Last Updated 23 ನವೆಂಬರ್ 2021, 20:00 IST
ಮನೀಶ್ ತಿವಾರಿ
ಮನೀಶ್ ತಿವಾರಿ   

ನವದೆಹಲಿ: ವಿವಿಧ ರಾಜ್ಯಗಳ ವಿಧಾನಸಭೆಯ ಚುನಾವಣೆಯ ಹೊಸ್ತಿಲಲ್ಲಿಯೇ ಕಾಂಗ್ರೆಸ್‌ ಪ‍ಕ್ಷವನ್ನು ಆ ಪಕ್ಷದ ಮುಖಂಡರೇ ಮುಜುಗರಕ್ಕೆ ಸಿಲುಕಿಸುತ್ತಿದ್ದಾರೆ. ಸಲ್ಮಾನ್‌ ಖುರ್ಷಿದ್ ಬಳಿಕ, ಸಂಸದ ಮನೀಶ್‌ ತಿವಾರಿ ಅವರು ಪಕ್ಷವು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದಾರೆ. 2008ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಬೇಕಿತ್ತು. ಆದರೆ,‌ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರವು ಹಾಗೆ ಮಾಡಲಿಲ್ಲ ಎಂದು ತಮ್ಮ ಹೊಸ ಪುಸ್ತಕದಲ್ಲಿ ತಿವಾರಿ ಹೇಳಿದ್ದಾರೆ.

ಸಂಯಮ ಎಂಬುದು ಶಕ್ತಿ ಅಲ್ಲ, ಅದು ದೌರ್ಬಲ್ಯದ ಸಂಕೇತ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಿವಾರಿ ಅವರ ‘10 ಫ್ಲ್ಯಾಷ್‌ ಪಾಯಿಂಟ್ಸ್‌, 20 ಇಯರ್ಸ್‌: ನ್ಯಾಷನಲ್‌ ಸೆಕ್ಯುರಿಟಿ ಸಿಚುವೇಷನ್ಸ್‌ ದ್ಯಾಟ್‌ ಇಂಪ್ಯಾಕ್ಟೆಡ್‌ ಇಂಡಿಯಾ’ ಕೃತಿಯು ಡಿಸೆಂಬರ್‌ 1ರಂದು ಬಿಡುಗಡೆ ಆಗಲಿದೆ. ರೂಪಾ ಸಂಸ್ಥೆಯು ಕೃತಿಯನ್ನು ಪ್ರಕಟಿಸಲಿದೆ.

ADVERTISEMENT

ಯುಪಿಎ ಸರ್ಕಾರದ ಪ್ರತಿಕ್ರಿಯೆ ಜಡವಾಗಿತ್ತು ಎಂಬ ಹೇಳಿಕೆಯನ್ನು ಹಿಡಿದುಕೊಂಡು ಬಿಜೆಪಿ, ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದೆ. 26/11ರ ಮುಂಬೈ ದಾಳಿಗೆ ಸರಿಯಾದ ತಿರುಗೇಟು ನೀಡದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಒಡ್ಡಿತ್ತು ಎಂದು ಬಿಜೆಪಿ ಆರೋಪಿಸಿದೆ.

‘ಯುಪಿಎ ಸರ್ಕಾರವು ಸಂವೇದನೆರಹಿತ ಮತ್ತು ನಿರುಪಯುಕ್ತವಾಗಿತ್ತು. ಆ ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆ ಬಗ್ಗೆಯೂ ಕಳಕಳಿ ಇರಲಿಲ್ಲ’ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಹೇಳಿದ್ದಾರೆ.

‘ರಾಷ್ಟ್ರೀಯ ಭದ್ರತಾ ಸ್ಥಿತಿಗೆ ಸರ್ಕಾರವು ನೀಡಿದ ಪ್ರತಿಕ್ರಿಯೆಯ ವಿಚಾರದ ಸಣ್ಣ ಭಾಗವೊಂದನ್ನು 304 ಪುಟಗಳ ಪುಸ್ತಕದಿಂದ ಆಯ್ದುಕೊಂಡು ಬಿಜೆಪಿ ಪ್ರತಿಕ್ರಿಯೆ ನೀಡುತ್ತಿರುವುದು ನನಗೆ
ನಗು ತರಿಸುತ್ತಿದೆ. ರಾಷ್ಟ್ರೀಯ ಭದ್ರತೆ ಯನ್ನು ಬಿಜೆಪಿ ನೇತೃತ್ವದ ಸರ್ಕಾರವು ನಿರ್ವಹಿಸಿದ ರೀತಿಯ ಬಗೆಗಿನ ‘ಕಠಿಣ ವಿಶ್ಲೇಷಣೆ’ಗೂ ಅವರು ಹೀಗೆಯೇ ಪ್ರತಿಕ್ರಿಯೆ ನೀಡುತ್ತಾರೆಯೇ’ ಎಂದು ತಿವಾರಿ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಿವಾರಿ ಅವರು ಯುಪಿಎ ಸರ್ಕಾರದಲ್ಲಿ 2012–2014ರ ಅವಧಿಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದರು. ಮನಮೋಹನ್‌ ಸಿಂಗ್‌ ಅವರಿಗೆ ಒಂದು ಕಾಲದಲ್ಲಿ ನಿಕಟವಾಗಿ
ದ್ದರು. ಇತ್ತೀಚೆಗೆ, ಅವರ ತವರು ರಾಜ್ಯ ಪಂಜಾಬ್‌ನಲ್ಲಿ ಪಕ್ಷದ ಆಗುಹೋಗುಗಳನ್ನು ನಿರ್ವಹಿಸುತ್ತಿರುವುದರ ಬಗ್ಗೆ ಬಹಿರಂಗವಾಗಿಯೇ ಟೀಕೆ ಮಾಡುತ್ತಿದ್ದಾರೆ.

ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರು ಬೇಕು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ 23 ಮುಖಂಡರಲ್ಲಿ ತಿವಾರಿ ಅವರೂ ಇದ್ದರು.

ಮೋದಿ ವಿರುದ್ಧವೂ ಟೀಕೆ

ಪರ್ವತ ಪ್ರದೇಶದಲ್ಲಿ ಹೋರಾಡುವ ತುಕಡಿಯನ್ನು ಕೈಬಿಡುವ ನಿರ್ಧಾರವು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ದೇಶಕ್ಕೆ ಮಾಡಿದ ಅತಿ ದೊಡ್ಡ ಅನ್ಯಾಯ ಎಂದು ತಿವಾರಿ ಆರೋಪಿಸಿದ್ದಾರೆ.

ಅಂತಹುವೊಂದು ತುಕಡಿಯು ಇದ್ದಿದ್ದರೆನೈಜ ನಿಯಂತ್ರಣ ರೇಖೆಯಲ್ಲಿನ ಒತ್ತಡ ಕಡಿಮೆ ಆಗುತ್ತಿತ್ತು. 2017ರ ದೋಕಲಾ ಬಿಕ್ಕಟ್ಟು ತಡೆಯಬಹುದಿತ್ತು. ಈ ತುಕಡಿಯನ್ನು ಕೈಬಿಟ್ಟದ್ದು ರಾಷ್ಟ್ರೀಯ ಭದ್ರತೆಗೆ ಬಹುದೊಡ್ಡ ಹೊಡೆತ ಎಂದು ಅವರು ವಿಶ್ಲೇಷಿಸಿದ್ದಾರೆ.

ಖುರ್ಷಿದ್‌ ವಿವಾದ

ಸಲ್ಮಾನ್‌ ಖುರ್ಷಿದ್‌ ಅವರ ‍‘ಸನ್‌ರೈಸ್‌ ಇನ್‌ ಅಯೋಧ್ಯಾ’ ಕೃತಿಯು ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಈ ಕೃತಿಯಲ್ಲಿ, ಹಿಂದುತ್ವವನ್ನು ಇಸ್ಲಾಮಿಸ್‌ ಸ್ಟೇಟ್‌ ಮತ್ತು ಬೊಕೊ ಹರಮ್‌ನಂತಹ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೊಂದಿಗೆ ಹೋಲಿಸಲಾಗಿತ್ತು. ಹಿಂದುತ್ವ ಮತ್ತು ಬಿಜೆಪಿ ಬೆಂಬಲಿಗರು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.