ಸಾಂದರ್ಭಿಕ ಚಿತ್ರ
ವಾರಾಣಸಿ: 9 ದಿನಗಳ ಸೆರೆವಾಸದ ಬಳಿಕ ಬಿಡುಗಡೆಯಾದ ಖುಷಿಯಲ್ಲಿ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದ ಆರೋಪಿಯೊಬ್ಬನನ್ನು ಪೊಲೀಸರು ಮತ್ತೆ ಜೈಲಿಗಟ್ಟಿರುವ ಘಟನೆ ವಾರಾಣಸಿಯಲ್ಲಿ ನಡೆದಿದೆ.
ಜೂನ್ 6ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಅಬಿದ್ ಖಾನ್ ಮೆರವಣಿಗೆ ನಡೆಸಿದ್ದ. ಆತನ ಬೆಂಬಲಿಗರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ದರು. ಆ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅದರ ಬೆನ್ನಲ್ಲೇ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
'ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕರ್ತವ್ಯಲೋಪ ಆರೋಪದ ಮೇಲೆ ತೆಲಿಯಾಬಾಗ್ ಪೊಲೀಸ್ ಠಾಣಾಧಿಕಾರಿ ಶಿವಂ ಶ್ರೀವಾಸ್ತವ ಅವರನ್ನು ಅಮಾನತು ಮಾಡಲಾಗಿದೆ. ಆರೋಪಿಯ ಸಹಚರರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಬಿದ್ ಸೇರಿದಂತೆ ಮೂವರನ್ನು ಜೈಲಿಗೆ ಕಳುಹಿಸಲಾಗಿದೆ. ಉಳಿದವರನ್ನೂ ಶೀಘ್ರವೇ ಬಂಧಿಸಲಾಗುವುದು' ಎಂದು ಕಾಶಿ ವಲಯದ ಡಿಸಿಪಿ ಗೌರವ್ ಬನ್ಸ್ವಾಲ್ ತಿಳಿಸಿದ್ದಾರೆ.
ಅಬಿದ್‌ನನ್ನು ಸದ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಹಿಂದಿನ ಪ್ರಕರಣದಲ್ಲಿ ನೀಡಿದ್ದ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.
ಕ್ರಿಮಿನಲ್ ಬೆದರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ–ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಮೇ 29ರಂದು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.