ADVERTISEMENT

ಹಣಕಾಸು ಸಚಿವರು ಕೋವಿಡ್‌ನಿಂದ ಗುಣಮುಖರಾದ ಬಳಿಕ ಚರ್ಚೆಗೆ ಸಿದ್ಧರಿದ್ದಾರೆ: ಬಿಜೆಪಿ

ಪಿಟಿಐ
Published 20 ಜುಲೈ 2022, 12:49 IST
Last Updated 20 ಜುಲೈ 2022, 12:49 IST
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌   

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೋವಿಡ್‌ನಿಂದ ಗುಣಮುಖರಾದ ಬಳಿಕ ಬೆಲೆ ಏರಿಕೆ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಸಿದ್ಧರಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಬಿಜೆಪಿ, ರಾಜಕೀಯವಾಗಿ ಅವರು ಅನುತ್ಪಾದಕರಿರಬಹುದು. ಆದರೆ ಸಂಸತ್ತಿನ ಉತ್ಪಾದಕತೆಗೆ ಹಾನಿ ಮಾಡಬಾರದು ಎಂದಿದೆ.

ನಿರ್ಮಲಾ ಸೀತಾರಾಮನ್‌ ಅವರು ಗುಣಮುಖರಾಗಿ ಸಂಸತ್ತಿಗೆ ಹಿಂತಿರುಗಿದ ಬಳಿಕ ಚರ್ಚೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯೆ ನೀಡಲಿದ್ದಾರೆ. ಪ್ರತಿಪಕ್ಷಗಳ ಬೇಡಿಕೆಯಂತೆ ಬೆಲೆ ಏರಿಕೆ ಮತ್ತು ನಿರ್ದಿಷ್ಟ ಆಹಾರೋತ್ಪನ್ನಗಳ ಮೇಲಿನ ಜಿಎಸ್‌ಟಿ ಕುರಿತಾಗಿ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌, ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ADVERTISEMENT

ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್‌ ವಿನಾಶಕಾರಕವಾಗಿ ವರ್ತಿಸುತ್ತಿದೆ. ಇದು ಜೈರಾಮ್‌ ರಮೇಶ್‌ ಅವರ, ಕಲಾಪವು ಸುಗಮವಾಗಿ ನಡೆಯುವುದನ್ನು ತಡೆಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ ಎಂಬ ಟ್ವೀಟ್‌ನಲ್ಲೇ ಗೊತ್ತಾಗುತ್ತದೆ. ಕೇಂದ್ರ ಸರ್ಕಾರವು ಚರ್ಚೆಯಿಂದ ತಪ್ಪಿಸಿಕೊಳ್ಳುತ್ತಿಲ್ಲ ಎಂದು ಪಿಯೂಷ್‌ ಗೋಯಲ್‌ ಸಂಸತ್ತಿನ ಹೊರಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸಕಾರಾತ್ಮಕ ಚರ್ಚೆಗೆ ಕಾಂಗ್ರೆಸ್‌ ಸಿದ್ಧವಿಲ್ಲ. ಅದರ ನಡೆ ಹಾನಿಕಾರಕವಾಗಿದೆ. ಚರ್ಚೆಗೆ ಅವಕಾಶ ನೀಡುವುದಾಗಿ ರಾಜ್ಯಸಭೆ ಮುಖ್ಯಸ್ಥರು ಮತ್ತು ಲೋಕಸಭೆ ಸ್ಪೀಕರ್‌ ಭರವಸೆ ನೀಡಿದ್ದಾರೆ. ಪ್ರತಿಪಕ್ಷಗಳು ಚರ್ಚೆಯ ಕಾರ್ಯ ವಿಧಾನವನ್ನು ಅನುಸರಿಸಬೇಕು ಎಂದು ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಅನುತ್ಪಾದಕ ರಾಜಕಾರಣಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ದೂರಿದ್ದಾರೆ.

ಅಧಿವೇಶನದ 3ನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬೆಲೆ ಏರಿಕೆ ಮತ್ತು ನಿರ್ದಿಷ್ಟ ಆಹಾರೋತ್ಪನ್ನಗಳ ಮೇಲಿನ ಜಿಎಸ್‌ಟಿ ಕುರಿತಾಗಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್‌ ಮತ್ತು ಇತರ ಪಕ್ಷಗಳ ಪಟ್ಟು ಹಿಡಿದಿರುವುದರಿಂದ ಇದುವರೆಗೆ ಕಲಾಪಗಳು ಸುಗಮವಾಗಿ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.