ADVERTISEMENT

ಕಾಂಗ್ರೆಸ್‌ಗೆ ಮರಳಿ ಬರಲು ಸಿದ್ಧ: ಶಂಕರ್‌ಸಿಂಗ್‌ ವಘೇಲಾ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 18:13 IST
Last Updated 3 ಫೆಬ್ರುವರಿ 2021, 18:13 IST
ಶಂಕರ್‌ಸಿಂಗ್‌ ವಘೇಲಾ
ಶಂಕರ್‌ಸಿಂಗ್‌ ವಘೇಲಾ   

ಅಹಮದಾಬಾದ್‌ (ಪಿಟಿಐ): ’ಆಡಳಿತ ಪಕ್ಷ ಬಿಜೆಪಿ ವಿರುದ್ಧ ಹೋರಾಡಲು ಯಾವುದೇ ಪೂರ್ವಷರತ್ತುಗಳಿಲ್ಲದೇ ಕಾಂಗ್ರೆಸ್‌ ಪಕ್ಷಕ್ಕೆ ಹಿಂತಿರುಗಲು ಸಿದ್ಧ‘ ಎಂದು ಗುಜರಾತಿನ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್‌ ವಘೇಲಾ ಬುಧವಾರ ತಿಳಿಸಿದ್ದಾರೆ.

20 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿದ್ದ ಶಂಕರ್‌ಸಿಂಗ್‌ ಅವರು 2017ರ ಗುಜರಾತ್‌ ಚುನಾವಣೆಗೆಗೂ ಮೊದಲು ಕಾಂಗ್ರೆಸ್‌ ತೊರೆದಿದ್ದರು. ಎರಡು ವರ್ಷಗಳ ಬಳಿಕ ಅವರು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಪಕ್ಷ ಸೇರಿದ್ದರು. ಕಳೆದ ಜೂನ್‌ ತಿಂಗಳಲ್ಲಿ ಪಕ್ಷದೊಳಗೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದ್ದರಿಂದ ಅಲ್ಲಿಂದ ಹೊರಬಂದು ಪ್ರಜಾ ಶಕ್ತಿ ಡೆಮಾಕ್ರಟಿಕ್‌ ಪಕ್ಷ (ಪಿಎಸ್‌ಡಿಪಿ) ಕಟ್ಟಿದ್ದರು.

ಪ್ರಸ್ತುತ ಪಿಎಸ್‌ಡಿಪಿ ಮುಖ್ಯಸ್ಥರಾಗಿರುವ80 ವರ್ಷದ ವಘೇಲಾ ಅವರು, ಅನೇಕ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ನಾಯಕರು ತಮ್ಮನ್ನು ಕಾಂಗ್ರೆಸ್‌ ಪಕ್ಷಕ್ಕೆ ಹಿಂತಿರುಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ADVERTISEMENT

‘ಕಳೆದ ವರ್ಷ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಅವರ ಅಂತಿಮಸಂಸ್ಕಾರಕ್ಕೆ ಹೋಗಿದ್ದಾಗ ಅಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಹಿಂತಿರುಗುವಂತೆ ಕಣ್ಣೀರು ಹಾಕಿದರು. ಬಿಜೆಪಿ ವಿರುದ್ಧ ಹೋರಾಡಲು ನಾನು ಯಾವುದೇ ಷರತ್ತುಗಳಿಲ್ಲದೇ ಕಾಂಗ್ರೆಸ್‌ ಸೇರಲು ಸಿದ್ಧ. ಕಾಂಗ್ರೆಸ್‌ಗೆ ವಾಪಸ್ಸಾಗಲು ನನಗೇನೂ ಅಭ್ಯಂತರವಿಲ್ಲ. ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಜೊತೆ ಮಾತುಕತೆ ನಡೆಸಿ ಸರಿಯಾದ ನಿರ್ಧಾರ ಕೈಗೊಳ್ಳುತ್ತೇನೆ‘ ಎಂದು ವಘೇಲಾ ತಿಳಿಸಿದ್ದಾರೆ.

ವಘೇಲಾ ಅವರು ಈ ಹೇಳಿಕೆಯನ್ನು ಬಿಡುಗಡೆ ಮಾಡುವ ಮೊದಲು ರಾಜ್ಯ ಕಾಂಗ್ರೆಸ್‌ ಇದು ಬರೀ ಗಾಳಿ ಸುದ್ದಿ ಎಂದು ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.