ADVERTISEMENT

ಪಾಕ್‌ ಸೇನೆಯ ಮೇಲೆ ದಾಳಿಗೆ ಸಿದ್ಧವಾಗಿತ್ತು ವಾಯುಸೇನೆ: ನಿವೃತ್ತ ಮುಖ್ಯಸ್ಥ ಧನೋವಾ

ಇದೇ ಮೊದಲು ಬಹಿರಂಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2019, 5:13 IST
Last Updated 15 ಡಿಸೆಂಬರ್ 2019, 5:13 IST
ಭಾರತೀಯ ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ
ಭಾರತೀಯ ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ   

‘ಬಾಲಾಕೋಟ್‌ ಉಗ್ರ ಶಿಬಿರದ ಮೇಲೆ ನಮ್ಮ ಯುದ್ಧವಿಮಾನಗಳುನಡೆಸಿದ ದಾಳಿಗೆ ಪ್ರತೀಕಾರವಾಗಿ ಪಾಕ್ ವಾಯುಪಡೆ ರೂಪಿಸಿದ್ದ ಕಾರ್ಯತಂತ್ರ ಯಶಸ್ವಿಯಾಗಿದ್ದರೆ ನಮ್ಮ ಯುದ್ಧವಿಮಾನಗಳು ಪಾಕ್ ಸೇನೆಯ ಮುಂಚೂಣಿಬ್ರಿಗೇಡ್‌ಗಳ ಮೇಲೆ ದೊಡ್ಡಮಟ್ಟದ ದಾಳಿ ನಡೆಸುತ್ತಿದ್ದವು’ ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಏರ್‌ ಮಾರ್ಷರ್‌ ಬಿ.ಎಸ್.ಧನೋವಾ ಹೇಳಿದರು.

ಚಂಡಿಗಡದಲ್ಲಿ ನಡೆಯುತ್ತಿರುವ ಸೇನಾ ಸಾಹಿತ್ಯ ಸಂಭ್ರಮದ (Military Literature Festival) 2ನೇ ದಿನ ‘ಬಾಲಾಕೋಟ್ ಸಂದೇಶ’ ವಿಷಯದ ಬಗ್ಗೆ ಅವರು ಆಡಿದ ಮಾತುಗಳನ್ನು ‘ಎನ್‌ಡಿಟಿವಿ’ ಮತ್ತು ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿವೆ.

ಕಳೆದ ಸೆಪ್ಟೆಂಬರ್ 30ರಂದುನಿವೃತ್ತರಾದ ಧನೋವಾ,ಬಾಲಾಕೋಟ್‌ ದಾಳಿಯನ್ನು ರೂಪಿಸಿ, ಅನುಷ್ಠಾನಕ್ಕೆ ತಂದ ಪ್ರಮುಖರಲ್ಲಿಒಬ್ಬರು. ನಿವೃತ್ತಿಯ ನಂತರ ಇದೇ ಮೊದಲ ಬಾರಿಗೆ ನೆನಪುಗಳನ್ನು ಅವರು ಸಾರ್ವಜನಿಕವಾಗಿ ಹಂಚಿಕೊಂಡರು. ಈ ಪೈಕಿ ಬಹುತೇಕ ಮಾಹಿತಿ ಇದೇ ಮೊದಲ ಬಾರಿಗೆ ಹೊರ ಜಗತ್ತಿಗೆ ತಿಳಿಯುತ್ತಿದೆ. ಧನೋವಾ ಮಾತುಗಳ ಅಕ್ಷರರೂಪ ಇಲ್ಲಿದೆ.

ADVERTISEMENT

ಅನಿವಾರ್ಯವಾಗಿತ್ತು ಬಾಲಾಕೋಟ್ ದಾಳಿ

‘ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಉಗ್ರರು ಸಿಆರ್‌ಪಿಎಫ್‌ ಬಸ್‌ ಸ್ಫೋಟಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಫೆ.26ಕ್ಕೆ ಭಾರತ ಬಾಲಾಕೋಟ್‌ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿತ್ತು. ಇದನ್ನು ಪ್ರತಿಭಟಿಸಿ ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ವಾಯುಪಡೆ ಫೆ.27ರಂದು ವ್ಯೂಹ ರಚಿಸಿಕೊಂಡು ಮುನ್ನುಗ್ಗಿ ಬಂದಿತ್ತು. ಪಾಕ್ ವಾಯುಪಡೆಯ ಇಂಥ ಸಾಹಸಕ್ಕೆ ಮುಂದಾಗಬಹುದು ಎಂದುನಾವು ಮೊದಲೇ ಊಹಿಸಿದ್ದೆವು.

‘ಬಾಲಾಕೋಟ್ ಮೇಲೆ ದಾಳಿ ನಡೆಸುವ ಮೂಲಕ‘ಭಾರತದ ಮೇಲೆ ದಾಳಿ ನಡೆಸಿದರೆ ಅದಕ್ಕೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ’ಎಂಬ ಸಂದೇಶ ನೀಡಲು ಸಶಸ್ತ್ರಪಡೆಗಳು ಉದ್ದೇಶಿಸಿದ್ದವು. ಬಾಲಾಕೋಟ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಭಾರತದ ನೆಲೆದ ಮೇಲೆ ಬಾಂಬ್ ಹಾಕಿದ್ದರೆ ನೇರವಾಗಿಪಾಕಿಸ್ತಾನದ ಪ್ರಮುಖ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೆವು. ಇಂಥ ದಾಳಿ–ಪ್ರತಿದಾಳಿಗಳಿಂದ ಯುದ್ಧದ ವಾತಾವರಣ ನಿರ್ಮಾಣವಾದರೆ ಅದನ್ನು ಎದುರಿಸಲು ನೌಕಾಪಡೆ, ವಾಯುಪಡೆ ಮತ್ತು ಭೂಸೇನೆ ಸಿದ್ಧವಾಗಿದ್ದವು.

‘ಭಾರತದ ಗಡಿಯಲ್ಲಿರುವ ಪಾಕ್ ಸೇನಾ ಠಾಣೆಗಳ ಮೇಲೆ ಮಾತ್ರವಲ್ಲ, ಪಾಕಿಸ್ತಾನದ ಒಳಗಿರುವ ಸೇನಾ ಬ್ರಿಗೇಡ್‌ಗಳ ಮೇಲೆಯೂ ದಾಳಿ ನಡೆಸುವ ಯೋಜನೆ ರೂಪಿಸಿಕೊಂಡಿದ್ದೆವು. ಪಾಕ್ ವಾಯುಪಡೆಯ ವಿಮಾನಗಳು ಫೆ.27ರಂದು ವ್ಯೂಹ ರಚಿಸಿಕೊಂಡು ಕಾಶ್ಮೀರದತ್ತ ಬಂದವಾದರೂ,ರಜೌರಿ ಮತ್ತು ಪೂಂಛ್ ವಲಯದಲ್ಲಿ ತನ್ನ ಗುರಿಯತ್ತ ಒಂದೇ ಒಂದು ಬಾಂಬ್ ಹಾಕಲೂ ಅವಕ್ಕೆಸಾಧ್ಯವಾಗಲಿಲ್ಲ.

‘ಯುದ್ಧ ಪಾಕ್‌ ಸರ್ಕಾರಕ್ಕೂ ಬೇಡವಾಗಿತ್ತು.ಪ್ರತೀಕಾರದ ದಾಳಿಯು ಅತಿರೇಕಕ್ಕೆ ಹೋದರೆ ಭಾರತದೊಂದಿಗಿನ ಯುದ್ಧಕ್ಕೆ ಪ್ರಚೋಚದನೆಯಾದೀತು ಎನ್ನುವ ಎಚ್ಚರಿಕೆ ಅಲ್ಲಿನ ಆಡಳಿತಗಾರರಿಗೆ ಇತ್ತು. ಹೀಗಾಗಿಯೇ ಅವರು ‘ನಾವು ನಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮಾತ್ರವೇ ದಾಳಿಗೆ ಮುಂದಾದೆವು’ ಎಂದು ಹೇಳಿಕೆ ಕೊಟ್ಟಿದ್ದರು’.

ದಾಳಿಗೆ ಬಾಲಾಕೋಟ್‌ ಆರಿಸಿಕೊಂಡಿದ್ದು ಏಕೆ?

‘ಫೆ.14ರ ಪುಲ್ವಾಮಾ ಬಾಂಬ್‌ ಸ್ಫೋಟದ ನಂತರ ವಾಯುಪಡೆಎದುರು ಜೈಷ್–ಎ–ಮೊಹಮದ್‌ ಉಗ್ರಗಾಮಿ ಸಂಘಟನೆಯ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆಯ್ಕೆಗಳನ್ನು ಪರಿಶೀಲಿಸುತ್ತಿತ್ತು.ಸುಖೋಯ್ 30 ಯುದ್ಧವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿ ಹಾರಿ ಬಿಡುವ ಸಾಧ್ಯತೆಯನ್ನೂ ಪರಿಶೀಲಿಸಿದ್ದೆವು.ಆದರೆ ಇದರಿಂದ ಯುದ್ಧದ ತೀವ್ರತೆ ಹೆಚ್ಚುತ್ತಿತ್ತು. ನಮ್ಮ ದಾಳಿಯ ಗುರಿ ಅಲ್ಲಿನ ಸೇನಾ ನೆಲೆಗಳು ಆಗಿರಲಿಲ್ಲ.ಎಲ್ಲರನ್ನೂ ಕೊಲ್ಲುವುದು ಮತ್ತುಎಲ್ಲವನ್ನೂ ಹಾಳು ಮಾಡುವುದು ಉದ್ದೇಶದಲ್ಲಿ ಸೇರಿರಲಿಲ್ಲ.

‘ಬಾಲಾಕೋಟ್‌ನಲ್ಲಿ ಉಗ್ರರ ತರಬೇತಿ ಶಿಬಿರ ಇರುವ ಮಾಹಿತಿಯನ್ನು ಪಾಕ್ ಗುಪ್ತಚರ ಸಂಸ್ಥೆಐಎಸ್‌ಐ, ಅಲ್ಲಿನ ವಾಯುಪಡೆಯಿಂದಲೇ ಮುಚ್ಚಿಟ್ಟಿದೆ ಎಂಬ ಖಚಿತ ಮಾಹಿತಿ ನಮಗೆ ಲಭ್ಯವಾಯಿತು. ಹೀಗಾಗಿ ದಾಳಿಗೆ ಬಾಲಾಕೋಟ್ಸೂಕ್ತ ಸ್ಥಳ ಎಂದು ಅದನ್ನೇ ಅಂತಿಮಗೊಳಿಸಿದೆವು. ಒಂದು ವೇಳೆ ಪಾಕ್ ವಾಯುಪಡೆಗೆ ಅಲ್ಲಿ ಉಗ್ರಗಾಮಿ ತರಬೇತಿ ಶಿಬಿರ ಇರುವ ಮಾಹಿತಿ ಇದ್ದರೆ ಅವರು ಖಂಡಿತಅದರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಭಾರತೀಯ ಯುದ್ಧವಿಮಾನಗಳನ್ನು ತಡೆಯಲು ಕನಿಷ್ಠ ಪಕ್ಷ ನೆಲದಿಂದ ಆಗಸಕ್ಕೆ ಚಿಮ್ಮುವ ವಿಮಾನ ನಿರೋಧಕ ಕ್ಷಿಪಣಿಗಳನ್ನಾದರೂನಿಯೋಜಿಸುತ್ತಿದ್ದರು’.

ಟೀವಿಯಲ್ಲಿ ಗೆಲ್ಲುವುದಲ್ಲ...

‘ನಮ್ಮ ಪೈಲಟ್‌ಗಳು ತಮ್ಮಕರ್ತವ್ಯವನ್ನು ಪ್ರಬುದ್ಧವಾಗಿ ನಿರ್ವಹಿಸಿದರು. ಭಾರತದ ಯುದ್ಧ ವಿಮಾನಗಳಿಂದ ಚಿಮ್ಮಿದ ಬಾಂಬ್‌ಗಳು ಗುರಿಮುಟ್ಟುವಲ್ಲಿ ವಿಫಲವಾದವು ಎಂದು ಕೆಲವರು ಇಂದಿಗೂ ಹೇಳುತ್ತಿದ್ದಾರೆ.ಇಂಥವರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು, ಮಾಧ್ಯಮಗಳಲ್ಲಿ ನಡೆಯುವ ಗ್ರಹಿಕೆಯ (ಪರ್ಸೆಪ್ಷನ್)ಯುದ್ಧ ಗೆಲ್ಲುವುದಕ್ಕಾಗಿ ನಮ್ಮ ದಾಳಿ ಮತ್ತು ಗುಪ್ತಚರ ಸಾಮರ್ಥ್ಯವನ್ನು ಪಣಕ್ಕೆ ಒಡ್ಡಲು ನಾವು ಸಿದ್ಧರಿರಲಿಲ್ಲ. ನಾವು ಏನು ಮಾಡಿದೆವು ಅದನ್ನು ಸಾಕಷ್ಟು ಪ್ಲಾನ್ ಮಾಡಿಯೇ ಮಾಡಿದ್ದೆವು.

‘ಅಂತರರಾಷ್ಟ್ರೀಯ ಏಜೆನ್ಸಿಗಳು ಓಪನ್‌ ಸೋರ್ಸ್‌ ಚಿತ್ರಗಳನ್ನು ಗಮನಿಸಿ ಭಾರತದ ಯುದ್ಧ ವಿಮಾನಗಳು ಗುರಿಯತ್ತ ನಿಖರ ದಾಳಿ ನಡೆಸಿಲ್ಲಎಂದು ಹೇಳಿವೆ. ಆದರೆ ಅವರಿಗೆ ನಮ್ಮ ಗುರಿ ಏನಾಗಿತ್ತು ಮತ್ತು ನಾವು ಎಂಥ ಆಯುಧಗಳನ್ನು ಬಳಸಿದೆವುಎಂಬ ಮಾಹಿತಿ ಇರಲಿಲ್ಲ’.

ಸ್ಟುಪಿಡ್ ಮಿಸ್ಟೇಕ್ಸ್ ಮಾಡಿದೆವು

‘ಬಾಲಾಕೋಟ್‌ ಮೇಲೆ ದಾಳಿ ನಡೆಸಿದ ಮಾರನೇ ದಿನ ಪಾಕ್ ವಾಯುಪಡೆ ಭಾರತದ ಮೇಲೆ ದಾಳಿಗೆ ಮುಂದಾದಾಗ ಭಾರತೀಯ ವಾಯುಪಡೆಯು ಕೆಲ ಮೂರ್ಖ ತಪ್ಪುಗಳನ್ನು (ಸ್ಪುಪಿಡ್ ಮಿಸ್ಟೇಕ್ಸ್) ಮಾಡಿತು. ನಮ್ಮತ್ತ ಬಂದಿದ್ದ ಪಾಕ್ ವಿಮಾನಗಳನ್ನು ಗಮನಾರ್ಹ ಸಂಖ್ಯೆಯಲ್ಲಿ ನಾಶಪಡಿಸಿ, ಅವರಿಗೆ ನಷ್ಟ ಉಂಟು ಮಾಡಲು ವಿಫಲರಾದೆವು.

‘ವಾಯುಯುದ್ಧಗಳಲ್ಲಿ ತಂತ್ರಜ್ಞಾನ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ. ಮಿಗ್–21 ಬೈಸನ್‌ ಹಾರಿಸುತ್ತಿದ್ದ ಅಭಿನಂದನ್ ಕೈಲಿ ಅಂದು ರಫೇಲ್ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.