ADVERTISEMENT

ಉತ್ತರ ಪ್ರದೇಶದ ಅಪ್ರಾಪ್ತೆ ನಾಪತ್ತೆ ಪ್ರಕರಣ: ದೆಹಲಿ ಪೊಲೀಸರಿಗೆ ವರ್ಗಾವಣೆ

ಪಿಟಿಐ
Published 7 ಸೆಪ್ಟೆಂಬರ್ 2021, 9:47 IST
Last Updated 7 ಸೆಪ್ಟೆಂಬರ್ 2021, 9:47 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಉತ್ತರ ಪ್ರದೇಶದಲ್ಲಿ ದಾಖಲಾದ ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದೆ.

ಜುಲೈ 8 ರಂದು ಉತ್ತರ ಪ್ರದೇಶದಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಇತ್ತೀಚಿಗೆ ದೆಹಲಿ ಪೋಲಿಸರು ಆಕೆಯನ್ನು ಪತ್ತೆ ಹಚ್ಚಿ, ಅಪಹರಣಕಾರನನ್ನು ಬಂಧಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎ.ಎಂ. ಖಾನ್‌ವಿಲ್ಕರ್ ನೇತೃತ್ವದ ಪೀಠವು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಬೇಕು’ ಎಂದು ಹೇಳಿದೆ.

ADVERTISEMENT

‘ಬಾಲಕಿಯನ್ನು ರಕ್ಷಿಸಲಾಗಿದ್ದು, ಆಕೆಯನ್ನು ಅಪಹರಿಸಿದ ವ್ಯಕ್ತಿಯನ್ನು ಸೆಪ್ಟೆಂಬರ್‌ 2ರಂದು ಕೋಲ್ಕತ್ತದಲ್ಲಿ ಬಂಧಿಸಲಾಗಿದೆ. ಸೆಪ್ಟೆಂಬರ್‌ 4 ರಂದು ಅವರಿಬ್ಬರನ್ನು ದೆಹಲಿಗೆ ಕರೆತರಲಾಗಿದೆ. ಈ ಬಳಿಕ ಬಾಲಕಿಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅಲ್ಲಿಯೇ ಆಕೆಗೆ ಕೌನ್ಸೆಲಿಂಗ್ ಕೂಡ ಮಾಡಲಾಯಿತು’ ಎಂದು ದೆಹಲಿ ಪೊಲೀಸರ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌(ಎಎಸ್‌ಜಿ) ಆರ್‌.ಎಸ್‌ ಸೂರಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

‘ಜುಲೈ 15ರಂದು ಬಾಲಕಿಯು ಆರೋಪಿಯನ್ನೇ ಮದುವೆಯಾಗಿದ್ದು ತಾಯಿಯೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಬಾಲಕಿಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲು ಆಕೆಯನ್ನು ಗೋರಖ್‌ಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಸೂರಿ ಅವರು ಹೇಳಿದರು.

‘ಬಾಲಕಿಗೆ ತಾಯಿಯೊಂದಿಗೆ ಹೋಗಲು ಇಷ್ಟವಿಲ್ಲ. ಆಕೆಗೆ ಪೋಷಕರ ಮೇಲೆ ಅಸಮಾಧಾನವಿದೆ. ಹಾಗಾಗಿ ಈ ಪ್ರಕರಣವನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಬೇಕು’ ಎಂದು ಅವರು ವಾದಿಸಿದರು.

ಬಾಲಕಿಯನ್ನು ಪತ್ತೆಹಚ್ಚುವಂತೆ ದೆಹಲಿ ಪೊಲೀಸ್‌ ಮತ್ತು ಉತ್ತರ ಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಬಾಲಕಿಯ ತಾಯಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಬಾಲಕಿಯ ತಾಯಿಯ ಪರವಾಗಿ ಹಾಜರಿದ್ದ ವಕೀಲ ಪೈ. ಅಮಿತ್‌ ಅವರು,‘ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಗರ್ಭೀಣಿಯಾಗಿರುವುದು ದೃಢಪಟ್ಟಿದೆ. ಹಾಗಾಗಿ ಆದಷ್ಟು ಬೇಗ ಕ್ರಮಕೈಗೊಳ್ಳಬೇಕು ಎಂದು ಪೀಠಕ್ಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.