ADVERTISEMENT

ಹಾಥರಸ್‌ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ನೀಡಿ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ

ಉತ್ತರ ಪ್ರದೇಶ ಸರ್ಕಾರಕ್ಕೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸಲಹೆ

ಪಿಟಿಐ
Published 6 ಅಕ್ಟೋಬರ್ 2020, 7:05 IST
Last Updated 6 ಅಕ್ಟೋಬರ್ 2020, 7:05 IST
ಮಾಯಾವತಿ
ಮಾಯಾವತಿ   

ಲಖನೌ:ಹಾಥರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾಗಿದ್ದಾರೆ ಎನ್ನಲಾದ ಸಂತ್ರಸ್ತ ದಲಿತ ಮಹಿಳೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕಡೆಗೆ ಗಂಭೀರವಾಗಿ ಗಮನಹರಿಸಬೇಕೆಂದು ಬಹುಜನ ಸಮಾಜವಾದ ಪಕ್ಷದ ಮುಖ್ಯಸ್ಥೆ ಮಾಯಾವತಿ ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಒಂದೊಮ್ಮೆ ಈ ಪ್ರಕರಣವನ್ನು ಸರಿಯಾಗಿ ನಿರ್ವಹಿಸದೇ, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡದಿದ್ದರೆ ಮುಂದೆ ನಡೆಯಬಹುದಾದ ಘಟನೆಗಳನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ‘ಚುನಾವಣಾ ತಂತ್ರ‘ ಎಂದು ಆರೋಪಿಸುವುದನ್ನು ನಿಲ್ಲಿಸಿದ ಮಾಯಾವತಿ, ’ಈಗಲೂ ಸರ್ಕಾರ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬಹುದು. ಆ ಮೂಲಕ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಒದಗಿಸಬಹುದು‘ ಎಂದು ಹೇಳಿದ್ದಾರೆ.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಭಾನುವಾರ ಒಂದೇ ದಿನ, ಉತ್ತರ ಪ್ರದೇಶದಾದ್ಯಂತ, ಜಾತಿ ಸಂಘರ್ಷ ಪ್ರಚೋದನೆ ಮತ್ತು ದೇಶದ್ರೋಹಕ್ಕೆ ಸಂಬಂಧಿಸಿದಂತೆ 19 ಎಫ್‌ಐಆರ್ ದಾಖಲಿಸಿದ್ದಾರೆ.

ಹಾಥರಸ್‌ ಜಿಲ್ಲೆಯ ಚಂಡ್ಪಾ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾದ ಒಂದು ಪ್ರಕರಣದಲ್ಲಿ, ಜಾತಿ ಸಂಘರ್ಷಕ್ಕೆ ಪ್ರಚೋದನೆ, ಗುಂಪುಗಳ ನಡುವೆ ವೈಷಮ್ಯಕ್ಕೆ ಉತ್ತೇಜನ ಮತ್ತು ಸರ್ಕಾರದ ಘನತೆಗೆ ಧಕ್ಕೆ ತರುವ ಪ್ರಯತ್ನ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 124ಎ ವಿಧಿಸುವ ಆರೋಪವನ್ನು ಹೊರಿಸಲಾಗಿದೆ.

ಹಾಥರಸ್‌ ಪ್ರಕರಣದಲ್ಲಿ ಜಾತಿ ಸಂಘರ್ಷ ಮತ್ತು ಕೋಮು ಸಂಘರ್ಷದ ವಿರುದ್ಧ ಕ್ರಮಕೈಗೊಳ್ಳುವ ನೆಪದಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪ ಸರಿಯೋ ಅಥವಾ ಇದು ಚುನಾವಣೆ ತಂತ್ರವೋ ಎಂಬುದನ್ನು ಕಾಲವೇ ಉತ್ತರಿಸಲಿದೆ ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.