
ನವದೆಹಲಿ: ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣದ ‘ಆತ್ಮಾಹುತಿ ಬಾಂಬರ್’ ಡಾ.ಉಮರ್ ನಬಿಗೆ ಸೇರಿದ ಮೊಬೈಲ್ ಫೋನ್ ಅನ್ನು ಜಮ್ಮು–ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ.
‘ಆತ್ಮಾಹುತಿ ದಾಳಿ’ಯನ್ನು ‘ಹುತಾತ್ಮ ಕಾರ್ಯಾಚರಣೆ’ ಎಂಬುದಾಗಿ ಹೇಳಿರುವ ಡಾ.ಉಮರ್, ಆತ್ಮಾಹುತಿ ದಾಳಿಯನ್ನು ಸಮರ್ಥಿಸಿ ಮಾತನಾಡಿರುವ ವಿಡಿಯೊವೊಂದು ಈ ಫೋನ್‌ನಲ್ಲಿ ಇತ್ತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
‘ಉಮರ್ ಸಹೋದರ ಝಹೂರ್ ಇಲಾಹಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ ವೇಳೆ, ನಿರ್ಣಾಯಕ ಸಾಕ್ಷ್ಯವಾಗಬಲ್ಲ ಈ ವಿಡಿಯೊ ಸಿಕ್ಕಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿರಿಯ ಎಸ್‌ಪಿ (ಶ್ರೀನಗರ) ಜಿ.ವಿ.ಸಂದೀಪ್ ಚಕ್ರವರ್ತಿ ರಚಿಸಿರುವ ವಿಶೇಷ ತಂಡವು ಇಲಾಹಿಯನ್ನು ಬಂಧಿಸಿದೆ.
‘ವಿಚಾರಣೆ ವೇಳೆ, ತನಗೆ ಕಾರು ಸ್ಫೋಟ ಕುರಿತು ಏನೂ ಗೊತ್ತಿಲ್ಲ ಎಂದೇ ಇಲಾಹಿ ಹೇಳುತ್ತಿದ್ದ. ತನಿಖಾಧಿಕಾರಿಗಳು ನಿರಂತರ ವಿಚಾರಣೆ ನಡೆಸಿದ ಬಳಿಕ ಉಮರ್ ಕುರಿತು ಹಲವು ಸಂಗತಿಗಳನ್ನು ಇಲಾಹಿ ಬಾಯ್ಬಿಟ್ಟ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಅಕ್ಟೋಬರ್ 26 ಹಾಗೂ 29ರ ನಡುವೆ ತಾನು ಕಾಶ್ಮೀರ ಕಣಿವೆಯಲ್ಲಿ ಇದ್ದೆ. ಆಗ, ಈ ಮೊಬೈಲ್‌ಅನ್ನು ಉಮರ್‌ಗೆ ಹಸ್ತಾಂತರಿಸಿದೆ. ಆತನ ಕುರಿತು ಏನಾದರೂ ಸುದ್ದಿ ಬಯಲಿಗೆ ಬಂದಾಗ, ಮೊಬೈಲ್ ಅನ್ನು ನೀರಿನಲ್ಲಿ ಬಿಸಾಡುವಂತೆ ಉಮರ್‌ಗೆ ಸೂಚನೆ ನೀಡಿದ್ದೆ ಎಂಬುದಾಗಿ ಇಲಾಹಿ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
‘ತನಿಖೆ ಚುರುಕುಗೊಂಡಾಗ, ಮೊಬೈಲ್ ಫೋನ್ ಎಸೆದಿದ್ದ ಸ್ಥಳಕ್ಕೆ ಪೊಲೀಸರನ್ನು ಇಲಾಹಿ ಕರೆದುಕೊಂಡು ಹೋಗಿದ್ದಾನೆ. ಮೊಬೈಲ್‌ಗೆ ಹಾನಿಯಾಗಿದ್ದರೂ ಸಹ, ವಿಧಿವಿಜ್ಞಾನ ತಜ್ಞರು ಅದಲ್ಲಿನ ಮಹತ್ವದ ದತ್ತಾಂಶ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದೂ ಹೇಳಿದ್ದಾರೆ.
ಹಿಂಸೆಯನ್ನು ವೈಭವೀಕರಿಸುವ ವಿಷಯವಸ್ತುವಿನಿಂದಾಗಿ ಉಮರ್ ಮೂಲಭೂತವಾದಿಯಾಗಿ ಬದಲಾಗಿರುವುದಕ್ಕೆ, ಐಎಸ್‌ಐಎಸ್ ಹಾಗೂ ಅಲ್‌ಕೈದಾ ನಡೆಸಿರುವ ಆತ್ಮಾಹುತಿ ದಾಳಿಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಆತ ವೀಕ್ಷಿಸಿರುವುದಕ್ಕೆ ಬಲವಾದ ಸಾಕ್ಷ್ಯ ಸಿಕ್ಕಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಆತ್ಮಾಹುತಿ ದಾಳಿ ಕುರಿತು ಉಮರ್ ಮಾತನಾಡಿದ್ದಾನೆ. ಇಸ್ಲಾಂ ಧರ್ಮವು ಹೊಗಳಿರುವ ಕೃತ್ಯಗಳಲ್ಲಿ ಆತ್ಮಾಹುತಿ ದಾಳಿಯೂ ಒಂದಾಗಿದೆ ಎಂಬುದು ಸೇರಿ ಇಂತಹ ಅನೇಕ ಹೇಳಿಕೆಗಳು ಇರುವ ಅನೇಕ ವಿಡಿಯೊಗಳನ್ನು ಆತ ಮಾಡಿದ್ದಾನೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.