ADVERTISEMENT

Delhi Blast |ನನ್ನಿಂದ ನಂಬಲು ಆಗುತ್ತಿಲ್ಲ: ಬಂಧಿತ ವೈದ್ಯೆ ಶಾಹೀನ್ ಸೋದರ ಹೇಳಿಕೆ

ಸಹೋದ್ಯೋಗಿ ಡಾ. ಮುಜಮ್ಮಿಲ್ ಕುರಿತೂ ಹೇಳಿರಲಿಲ್ಲ– ಶಾಹೀನ್ ತಂದೆ

ಪಿಟಿಐ
Published 12 ನವೆಂಬರ್ 2025, 14:17 IST
Last Updated 12 ನವೆಂಬರ್ 2025, 14:17 IST
<div class="paragraphs"><p>ದೆಹಲಿ ಸ್ಫೋಟ</p></div>

ದೆಹಲಿ ಸ್ಫೋಟ

   

ಲಖನೌ/ಕಾನ್ಪುರ: ಭಯೋತ್ಪಾದಕ ಚಟುವಟಿಕೆಯಲ್ಲಿ ತನ್ನ ಸೋದರಿಯ ಪಾತ್ರದ ಕುರಿತ ಆರೋಪವನ್ನು ನನ್ನಿಂದ ನಂಬಲು ಆಗುತ್ತಿಲ್ಲ. ಆಕೆ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಳೆ ಎನ್ನುವುದನ್ನು ನಮ್ಮ ಕುಟುಂಬ ಒಪ್ಪಿಕೊಳ್ಳಲು ಇನ್ನೂ ಕಷ್ಟವಾಗುತ್ತಿದೆ  ಎಂದು ದೆಹಲಿ ಸ್ಫೋಟ ಪ್ರಕರಣದ ಬಂಧಿತ ವೈದ್ಯೆ ಶಾಹೀನ್ ಸಯೀದ್‌ ಅಣ್ಣ ಮೊಹಮ್ಮದ್ ಶೋಯೆಬ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದೆಡೆ ಆಕೆಯ ಮಾಜಿ ಪತಿ ಪ್ರತಿಕ್ರಿಯಿಸಿ, ‘ನಾವಿಬ್ಬರೂ ಜೊತೆಗಿದ್ದಾಗ ಆಕೆ ಯಾವತ್ತೂ ಬುರ್ಕಾ ಧರಿಸುತ್ತಿರಲಿಲ್ಲ. ಮಕ್ಕಳಿಗೆ ಪ್ರೀತಿಪಾತ್ರ ತಾಯಿಯಾಗಿದ್ದಳು. ಉತ್ತಮ ಜೀವನಕ್ಕಾಗಿ ವಿದೇಶದಲ್ಲಿ ನೆಲಸಲು ಬಯಸಿದ್ದಳು’ ಎಂದು ಹೇಳಿದ್ದಾರೆ.

ADVERTISEMENT

ಲಖನೌನಲ್ಲಿ ಆಕೆಯ ಸೋದರ ಶೋಯೆಬ್ ಪ್ರತಿಕ್ರಿಯಿಸಿ, ‘ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ನಮ್ಮ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು, ಪ್ರಶ್ನೆಗಳನ್ನು ಕೇಳಿದರು. ಆಕೆ ಕೊನೆಯದಾಗಿ ನಿಮ್ಮ ಮನೆಗೆ ಯಾವಾಗ ಬಂದಿದ್ದಳು ಎಂದು ಕೇಳಿದರು. ನಮ್ಮೊಂದಿಗೆ ಗೌರವಯುತವಾಗಿ ನಡೆದುಕೊಂಡರು’ ಎಂದು ಹೇಳಿದ್ದಾರೆ.

‘ಕಳೆದ ನಾಲ್ಕು ವರ್ಷಗಳಿಂದ ಆಕೆಯ ಸಂಪರ್ಕವಿಲ್ಲ. ಮಾತನ್ನೂ ಆಡಿಲ್ಲ. ಏನೇ ಇದ್ದರೂ ಪೋಷಕರು ಆಗಾಗ ವಿಚಾರಿಸಿಕೊಳ್ಳುತ್ತಿದ್ದರು. ಐಐಎಂ ರಸ್ತೆಯ ಆಕೆಯ ಲಖನೌ ಮನೆಗೂ ಹೋಗಿಲ್ಲ. ಔಷಧ ವಿಜ್ಞಾನ ಓದುವಾಗಲೂ ಅನುಮಾನ ಬರುವ ಚಟುವಟಿಕೆಯ ಸುಳಿವು ಕಂಡಿರಲಿಲ್ಲ. ಈಗ ಬಂದಿರುವ ಆರೋಪಗಳನ್ನು ನಾನು ಒಪ್ಪುವುದಿಲ್ಲ’ ಎಂದಿದ್ದಾರೆ.

ಆಕೆ ಮನಸಿನಲ್ಲಿ ಏನಿತ್ತೋ ಗೊತ್ತಿಲ್ಲ: ಪತಿ

ಕಾನ್ಪುರದಲ್ಲಿ ಮಾಜಿ ಪತಿ ಡಾ. ಜಾಫರ್‌ ಹಯಾತ್‌ ಪ್ರತಿಕ್ರಿಯಿಸಿದ್ದು, ‘ಮಂಗಳವಾರ ಸಂಜೆ ಆಕೆಯ ಪಾತ್ರದ ಬಗ್ಗೆ ತಿಳಿದೆ.ಇದೆಲ್ಲವನ್ನೂ ಮಾಡಲು ಆಕೆಯ ಮನಸ್ಸಿನಲ್ಲಿ ಏನಿತ್ತೋ ಗೊತ್ತಿಲ್ಲ. ಇಬ್ಬರೂ ಬೇರೆಬೇರೆಯಾಗಿ ವೈದ್ಯ ಶಿಕ್ಷಣ ಪಡೆದಿದ್ದೆವು. 2003ರಲ್ಲಿ ಮದುವೆಯಾಗಿತ್ತು. 2012ರಲ್ಲಿ ವಿಚ್ಛೇದನವಾಯಿತು. ನಮ್ಮ ನಡುವೆ ಜಗಳ ಇರಲಿಲ್ಲ. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದಳು’ ಎಂದಿದ್ದಾರೆ.

‘ಆಸ್ಟ್ರೇಲಿಯಾ ಅಥವಾ ಯೂರೋಪ್‌ಗೆ ಹೋಗಿ ನೆಲಸೋಣ ಎಂದು ಈ ಹಿಂದೆ ನನಗೆ ಕೇಳುತ್ತಿದ್ದಳು. ಆಕೆ ಭಾರತದಲ್ಲೇ ಇದ್ದಾಳೆ ಎನ್ನುವುದು ಇತ್ತೀಚೆಗಷ್ಟೇ ತಿಳಿದಿತ್ತು’ ಎಂದು ಹಯಾತ್‌ ಹೇಳಿದ್ದಾರೆ. 

ಮುಜಮ್ಮಿಲ್‌ ಜೊತೆ ಸಂಪರ್ಕ: ತನಿಖಾಧಿಕಾರಿಗಳ ಪ್ರಕಾರ ಫರೀದಾಬಾದ್‌ನ ಅಲ್ ಪಲಾಹ್‌ ವಿ.ವಿ.ಯ ಬಂಧಿತ ವೈದ್ಯೆ ಶಾಹೀನ್‌ ಶಹೀದ್ ಸಹೋದ್ಯೋಗಿ ಡಾ.ಮುಜಮ್ಮಿಲ್ ಗನಿ ಜೊತೆ ಸಂಪರ್ಕ ಹೊಂದಿದ್ದರು. ಮುಜಮ್ಮಿಲ್ ‘ವೈಟ್ ಕಾಲರ್‌ ಭಯೋತ್ಪಾದಕ’ ಕೃತ್ಯದ ಸೂತ್ರಧಾರಿ ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ.

ಶಾಹೀನ್‌ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ತಂದೆ ಸಯ್ಯದ್ ಅಹ್ಮದ್ ಅನ್ಸಾರಿ, ‘ನನ್ನ ಮಗಳ ಮೇಲಿನ ಆರೋಪ ಕೇಳಿ ಆಘಾತವಾಯಿತು. ತಿಂಗಳ ಹಿಂದೆ ಆಕೆ ಜೊತೆ ಮಾತನಾಡಿದ್ದೆ. ಡಾ.ಮುಜಮ್ಮಿಲ್‌ ಬಗ್ಗೆಯಾಗಲಿ, ಇಂತಹ ಚಟುವಟಿಕೆ ಕುರಿತಾಗಲಿ ಆಕೆ ಯಾವತ್ತೂ ಪ್ರಸ್ತಾಪಿಸಿರಲಿಲ್ಲ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.